ತ್ರಿಶೂರ್: ಸಂಪ್ರದಾಯವನ್ನು ಧಿಕ್ಕರಿಸಿದ ಟೀಕೆಗೆ ಗುರಿಯಾಗಿಯೂ ಕೇರಳದ ಮುಸ್ಲಿಂ ಮಹಿಳೆಯೊಬ್ಬರು ಶವಗಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ತ್ರಿಶೂರ್ ಜಿಲ್ಲೆಯ ಇರಿಂಗಲಕುಡ ಮುಕ್ತಿಸ್ಥಾನ್‌ನಲ್ಲಿರುವ ಶವಾಗಾರದಲ್ಲಿ 29 ವರ್ಷದ ಸುಬಿನಾ ಎಂಬವರು ಕೆಲಸ ಮಾಡುತ್ತಿದ್ದಾರೆ.
ಸಾಂಪ್ರದಾಯಿಕವಾಗಿ ಒಬ್ಬ ಪುರುಷ ಮಾಡಬೇಕಾದ ಕೆಲಸ ಇದು. ಆದರೆ, ಜೀವನ ಸಾಗಿಸಲು ಈ ಕೆಲಸವನ್ನು ಮಹಿಳೆ ಮಾಡುತ್ತಿರುವುದು ನೋವಿನ ಸಂಗತಿ.
ಕೆಲ ವರ್ಷಗಳ ಹಿಂದೆ ಸುಬಿನಾ ತಂದೆ ಮರಗಳನ್ನು ಕಡಿಯುವಾಗ ಕೆಳಗೆ ಬಿದ್ದು, ನಂತರ ಹಾಸಿಗೆ ಹಿಡಿದಿದ್ದಾರೆ. ಈ ಬಳಿಕ ಅವರಿಗೆ ಐದು ಶಸ್ತ್ರಚಿಕಿತ್ಸೆಗಳು ನಡೆದವು. ಘಟನೆ ನಡೆದ ನಂತರ ಆಕೆಯ ಕುಟುಂಬದಲ್ಲಿ ಪರಿಸ್ಥಿತಿ ಕಠೋರವಾಯಿತು. ಹಿರಿಯ ಮಗಳಾದ್ದರಿಂದ ಕುಟುಂಬದ ಜವಾಬ್ದಾರಿ ಸುಬಿನಾ ಮೇಲೆಯೇ ಬಿತ್ತು. ಹೀಗಾಗಿ ಶವಾಗಾರದಲ್ಲಿ ಕೆಲಸ ಮಾಡಲು ಸುಬಿನಾ ಮುಂದಾಗುತ್ತಾಳೆ. ಈಕೆಯ ಕೆಲಸಕ್ಕೆ ಸಂಪ್ರದಾಯ ಅಡ್ಡಿ ಬಂದರೂ ಪತಿ ರೆಹಮಾನ್ ಮಾತ್ರ ಪತ್ನಿಗೆ ಬೆಂಬಲವಾಗಿ ನಿಂತಿದ್ದು, ಶ್ಲಾಘನೀಯವೇ ಸರಿ.