ಬೆಂಗಳೂರು: ಬಿಎಂಟಿಸಿ ಚಾಲಕನಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಇಲಾಖೆ ಅಧಿಕಾರಿಗಳು, ಕರ್ತವ್ಯದ ವೇಳೆ ಚಾಲಕ, ನಿರ್ವಾಹಕರು ಮಾಸ್ಕ್ ಧರಿಸದಿದ್ದರೆ ದಂಡ ಹಾಕುವುದಾಗಿ ಎಚ್ಚರಿಸಲಾಗಿದೆ.
ಇಲಾಖೆ ವತಿಯಿಂದ ಫೇಸ್ ಮಾಸ್ಕ್, ಸ್ಯಾನಿಟೈಸರ್, ಹ್ಯಾಂಡ್ ಗ್ಲೌಸ್ ಒದಗಿಸಿದ್ದು, ಮುಂಜಾಗ್ರತಾ ಕ್ರಮವಾಗಿ ಇವುಗಳನ್ನ ಬಳಸುವುದು ಕಡ್ಡಾಯ ಮಾಡಲಾಗಿದೆ. ಆದರೆ ಕೆಲವು ಚಾಲಕ ಹಾಗೂ ನಿರ್ವಾಹಕರು ನಿಯಮ ಪಾಲಿಸುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಅಷ್ಟೇ ಅಲ್ಲದೆ ಮಾಸ್ಕ್ ಧರಿಸದೆ ಕರ್ತವ್ಯ ನಿರ್ವಹಿಸಿದ್ದರೆ ಅಂತವರ ವಿರುದ್ಧ ಸಾರಥಿ, ತನಿಖಾ ಸಿಬ್ಬಂದಿ ಮತ್ತು ಬಸ್ ನಿಲ್ದಾಣಾಧಿಕಾರಿಗಳಿಗೆ ಪ್ರಕರಣ ದಾಖಲಿಸಿಕೊಳ್ಳುವಂತೆ ಸೂಚಿಸಲಾಗಿದೆ.
ದಂಡದ ಪ್ರಮಾಣ:
ಮಾಸ್ಕ್ ಧರಿಸದವರ ವಿರುದ್ಧ ಮೊದಲ ಬಾರಿಗೆ 500 ರೂ. ದಂಡ ವಿಧಿಸಲಾಗುತ್ತದೆ. ಇದಾದ ಬಳಿಕವೂ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಶಿಸ್ತು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರು ನೀಡಿದ್ದಾರೆ.