ಬೆಂಗಳೂರು: ಬಹುಮುಖ ಪ್ರತಿಭೆ, ಬಹುಸಂಸ್ಕೃತಿ ಪೋಷಿಸಿದ ಕನ್ನಡ ಸಾಹಿತ್ಯ ಲೋಕದ ಅದ್ಭುತ ನಕ್ಷತ್ರ, ನಾಟಕಕಾರ ಹಾಗೂ ನಟ ಡಾ. ಗಿರೀಶ್ ಕಾರ್ನಾಡ್ ಇಂದು ಮುಂಜಾನೆ ಇಹಲೋಕ ತ್ಯಜಿಸಿದ್ದಾರೆ.
ಕನ್ನಡ, ಹಿಂದಿ, ತೆಲಗು,ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ತಮ್ಮ ಅಭಿನಯದಿಂದ ವಿಶಿಷ್ಠ ಮುದ್ರೆ ಒತ್ತಿದ್ದ ಕಾರ್ನಾಡರು ಕನ್ನಡಕ್ಕೆ ಏಳನೇ ಜ್ಞಾನಪೀಠ ಪ್ರಶಸ್ತಿ ತಂದಿಕೊಟ್ಟಿದ್ದರು.
ಯಯಾತಿ ಸೂತ್ರದಾರ ಇನ್ನೂ ನೆನಪಷ್ಟೇ.. ಜ್ಞಾನಪೀಠ ಪುರಸ್ಕೃತ ಗಿರೀಶ್ ಕಾರ್ನಾಡ್ ವಿಧಿವಶ!
ಪ್ರಗತಿಶೀಲ ಸಮತಾವಾದ ಮತ್ತು ಜಾತ್ಯಾತೀತತೆಯನ್ನು ಪ್ರತಿಪಾದಿಸುತ್ತಿದ್ದ ಗಿರೀಶ್ ಕಾರ್ನಾಡರು ವಿವಾದಗಳಿಂದ ಮುಕ್ತವಾಗಿರಲಿಲ್ಲ.
ಬಾಲ್ಯ:
1938 ಮೇ 19ರಂದು ಮಹಾರಾಷ್ಟ್ರದ ಮಾಥೇರಾನದಲ್ಲಿ ಗಿರೀಶ್ ಕಾರ್ನಾಡರು ಜನಿಸಿದರು. ಇವರ ತಂದೆ ರಘುನಾಥ ಕಾರ್ನಾಡ ಮುಂಬೈಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ತಾಯಿ ಕೃಷ್ಣಾಬಾಯಿ ಬಾಲ್ಯವಿವಾಹವಾಗಿ ಒಂದು ಮಗುವಾದ ನಂತರ ವಿಧವೆಯಾಗಿದ್ದರು. ರಘುನಾಥರ ಆಸ್ಪತ್ರೆಯಲ್ಲಿ ಶುಶ್ರೂಷಕಿಯಾಗಿ ಸೇವೆ ಸಲ್ಲಿಸುವಾಗ ಪರಿಚಯವಾದ ಇವರನ್ನು ಆಗಿನ ಸಾಮಾಜಿಕ ಕಟ್ಟುಪಾಡುಗಳ ವಿರುದ್ಧವಾಗಿ ರಘುನಾಥರು ಕೈಹಿಡಿದರು. ನಂತರ ಈ ದಂಪತಿಯ ಮೂರನೇ ಮಗನಾಗಿ ಗಿರೀಶ್ ಜನಿಸಿದರು.
ಬಾಲ್ಯದಲ್ಲಿ ಕೆಲಕಾಲ ಮರಾಠಿ ಶಿಕ್ಷಣ ಪಡೆದ ನಂತರ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ ಧಾರವಾಡದ ಬಾಸೆಲ್ ಮಿಶನ್‌ನಲ್ಲಿ ಹೈಸ್ಕೂಲ್ ಓದಿದ ನಂತರ ಕರ್ನಾಟಕ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು ಮುಗಿಸಿದರು. ನಂತರ ಹೋರ್ಡ್ ಸ್ಕಾಲರ್‌ಶಿಪ್ ಪಡೆದುಕೊಂಡು ಆಕ್ಸ್‌ಫರ್ಡ್ ಯುನಿವರ್ಸಿಟಿಯಲ್ಲಿ ರಾಜಕೀಯಶಾಸ್ತ್ರ, ತತ್ವಶಾಸ್ತ್ರ ಮತ್ತು ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. 1963ರಲ್ಲಿ ಚರ್ಚಾಕೂಟದ ವೇದಿಕೆಯಾದ ಆಕ್ಸ್‌ಫರ್ಡ್ ಯೂನಿಯನ್ ಆಧ್ಯಕ್ಷ ಸ್ಥಾನ ವಹಿಸಿಕೊಂಡರು.
ವೃತ್ತಿ ಜೀವನ :
ಚೆನ್ನೈನಲ್ಲಿ ಆಕ್ಸ್‌ಫರ್ಡ್ ಯುನಿವರ್ಸಿಟಿ ಪ್ರೆಸ್‌ನಲ್ಲಿ ಸುಮಾರು 7 ವರ್ಷ ಕೆಲಸ ಮಾಡಿದ ಕಾರ್ನಾಡರು ನಂತರ ಅಮೆರಿಕಾದ ಚಿಕಾಗೋ ಯೂನಿವರ್ಸಿಟಿಯಲ್ಲಿ ಒಂದು ವರ್ಷ ಅತಿಥಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿದರು. ಇವೆಲ್ಲರ ಮಧ್ಯೆಯೇ ನಾಟಕ ಬರಹದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಕೆಲಕಾಲ ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ ಮತ್ತು ಸಂಗೀತ ನಾಟಕ ಅಕಾಡೆಮಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. 1980ರಲ್ಲಿ ಡಾ.ಸರಸ್ವತಿ ಗಣಪತಿಯವರನ್ನು ವರಿಸಿದರು. ಈ ದಂಪತಿಗೆ ಒಬ್ಬ ಪುತ್ರ ಮತ್ತು ಪುತ್ರಿ ಜನಿಸಿದ್ದಾರೆ. 2011ರಲ್ಲಿ 'ಆಡಾಡತ ಆಯುಷ್ಯ' ಹೆಸರಿನಲ್ಲಿ ಕಾರ್ನಾಡರು ತಮ್ಮ ಆತ್ಮಕಥೆ ರಚಿಸಿದರು.
ಕಾರ್ನಾಡರು ಬರೆದ ನಾಗಮಂಡಲ ಒಂದು ಜನಪದ ಕಥೆಯಾಗಿದ್ದು, ಇವರಿಗೆ ಕರ್ನಾಟಕ ಸಾಹಿತ್ಯ ಪ್ರಶಸ್ತಿ ದೊರೆಕಿಸಿಕೊಟ್ಟಿತು. ಇದು ಮನುಷ್ಯನ ಕಾಮವನ್ನು ಬಹುರೂಪಿ ಸರ್ಪದೊಂದಿಗೆ ಸಮೀಕರಿಸಿ ಬರೆದ ನಾಟಕವಾಗಿತ್ತು. ಇದು ಮುಂದೆ 1997ರಲ್ಲಿ ಟಿ ಎಸ್ ನಾಗಭರಣರ ನಿರ್ದೇಶನದಲ್ಲಿ ಚಲನಚಿತ್ರವಾಗಿ ಮೂಡಿತು. ಮಹಾಭಾರತದ ಪಾತ್ರ ಯಯಾತಿ ಮೇಲೆ ಹೊರಬಂದ ನಾಟಕ 'ಯಯಾತಿ' ವಿವಾಹಿತ ರಾಜನ ಅತೃಪ್ತ ಕಾಮ ವಾಸನೆ ಮತ್ತು ಅತಿಲೋಲುಪತೆಯ ಮೇಲೆ ಬೆಳುಕು ಚೆಲ್ಲಿತು. ನೆಹರೂ ಕಾಲದ ಅತಿಯಾದ ಆದರ್ಶವಾದ ಮತ್ತು ಹತಾಶೆಯಲ್ಲಿ ಪರ್ಯಾವಸಾನಗೊಂಡ ವ್ಯಥೆಯನ್ನು ತುಘಲಕ್‌ನೊಂದಿಗೆ ಸಮೀಕರಿಸಿ ಐತಿಹಾಸಿಕ 'ತುಘಲಕ್' ನಾಟಕ ರಚಿಸಿದರು.
ಕಥಾಸರಿತ್ಸಾಗರದ ಆಧರಿತ`'ಹಯವದನ' ಮನುಷ್ಯನ ಅಪೂರ್ಣತೆ, ಪೂರ್ಣತೆಯೆಡೆಗಿನ ಬಯಕೆಯ ಮೇಲೆ ಬೆಳಕು ಚೆಲ್ಲಿತು. ನಂತರ ಬಂದ 'ತಲೆದಂಡ' 12ನೇ ಶತಮಾನದಲ್ಲಿ ಬಸವಕಲ್ಯಾಣದಲ್ಲಿ ಬಸವಾದಿ ಪ್ರಮಥರ ಮೇಲೆ ನಡೆದಂತ ದಬ್ಬಾಳಿಕೆ, ಕಗ್ಗೊಲೆಗಳನ್ನು ತೆರೆದಿಟ್ಟಿತು. ಗಿರೀಶ್ ಕಾರ್ನಾಡರ 'ಅಂಜು ಮಲ್ಲಿಗೆ' ನಾಟಕ ಸಹೋದರ- ಸಹೋದರಿಯ ನಡುವೆ ಮೂಡುವ ನಿಷಿದ್ಧ ಪ್ರೇಮದೆಡೆಗೆ ಬೆಳಕು ಚೆಲ್ಲುತ್ತದೆ. ಹೀಗೆ ಕಾರ್ನಾಡರ ನಾಟಕ ಪ್ರಪಂಚ ಬದುಕಿನ ಮತ್ತು ಮನುಷ್ಯನ ಜೀವನ ಘಟ್ಟದ ಹಲವಾರು ಆಯಾಮಗಳ ಪರಿಚಯ ಮಾಡಿಸಿಕೊಡುತ್ತವೆ.
ನಟನಾ ವೃತ್ತಿ:
ಕನ್ನಡದ ಪ್ರಥಮ ಕಲಾತ್ಮಕ ಚಲನಚಿತ್ರ ಯು ಆರ್ ಅನಂತಮೂರ್ತಿಯವರ ಕಾದಂಬರಿಯನ್ನು ಆಧಾರಿತ ಸಂಸ್ಕಾರದಲ್ಲಿ ಗಿರೀಶ್ ಕಾರ್ನಾಡ್ ಪ್ರಾಣೇಶಾಚಾರ್ಯ ಎನ್ನುವ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಈ ಚಿತ್ರ ಕನ್ನಡಕ್ಕೆ ಪ್ರಥಮ ಸ್ವರ್ಣಕಮಲವನ್ನು ತಂದುಕೊಟ್ಟಿತ್ತು.
ಇದಾದ ಬಳಿಕ ಎಸ್ ಎಲ್ ಭೈರಪ್ಪನವರ ವಂಶವೃಕ್ಷ ಕಾದಂಬರಿಯನ್ನು ಆಧರಿಸಿ, ಬಿ ವಿ ಕಾರಂತರ ಜೊತೆಗೂಡಿ ವಂಶವೃಕ್ಷ ಚಿತ್ರವನ್ನು ನಿರ್ದೇಶನ ಮಾಡಿದರು. ಇದು ಹಲವಾರು ರಾಷ್ಟ್ರೀಯ, ಅಂತಾರಾರಾಷ್ಟ್ರೀಯ ಪುರಸ್ಕಾರಕ್ಕೆ ಭಾಜನವಾಯಿತು.
ತಬ್ಬಲಿಯು ನೀನಾದೆ ಮಗನೆ, ಕಾಡು, ಒಂದಾನೊಂದು ಕಾಲದಲ್ಲಿ ಚಿತ್ರಗಳನ್ನು ನಿರ್ದೇಶಿಸಿದರು. ಕಾಡು ಹಲವಾರು ಪ್ರಶಸ್ತಿ ಪುರಸ್ಕಾರ ಪಡೆಯಿತು. ಉತ್ಸವ, ಗೋಧೂಳಿ ಎಂಬ ಹಿಂದಿ ಚಿತ್ರಗಳನ್ನು ನಿರ್ದೇಶಿಸಿದರು. ರಾಷ್ಟ್ರಕವಿ ಕುವೆಂಪು ಅವರ ಕಾನೂರು ಸುಬ್ಬಮ್ಮ ಹೆಗ್ಗಡತಿ ಕಾದಂಬರಿಯನ್ನು ಆಧರಿಸಿ ಕಾನೂರು ಹೆಗ್ಗಡಿತಿ ಚಿತ್ರವನ್ನು ನಿರ್ದೇಶಿಸಿದ್ದರು. ಈ ಸಿನಿಮಾ ರಾಜ್ಯ ಪ್ರಶಸ್ತಿ, ರಾಷ್ಟ್ರೀಯ ಪುರಸ್ಕಾರ ಪಡೆದು, ಪನೋರಮಾಕ್ಕೂ ಆಯ್ಕೆಯಾಯಿತು.
ಇದಲ್ಲದೆ ಕನಕ ಪುರಂದರ, ದ ರಾ ಬೇಂದ್ರೆ ಹಾಗೂ ಸೂಫಿ ಪಂಥ ಸಾಕ್ಷ್ಯಚಿತ್ರಗಳನ್ನು ನಿರ್ದೇಶಿಸಿದರು. ಪರಿಸರ ವಿನಾಶ ಕುರಿತು ಚೆಲುವಿ ಎಂಬ ಕಿರುಚಿತ್ರವನ್ನು ನಿರ್ದೇಶಿಸಿದರು. 2007ರಲ್ಲಿ ತೆರೆಕಂಡ ಆ ದಿನಗಳು ಚಿತ್ರಕ್ಕೆ ಅಗ್ನಿ ಶ್ರೀಧರ್ ಅವರ ಜೊತೆಗೂಡಿ ಚಿತ್ರಕಥೆಯನ್ನು ಬರೆದಿದ್ದಾರೆ.