ಹೈಲಕಂಡಿ(ಅಸ್ಸೋಂ): ಜಾತಿ, ಧರ್ಮ ಎಲ್ಲವನ್ನೂ ಮೀರಿದ್ದು ಮಾನವೀಯತೆ. ಕೋಮುಗಲಭೆಯಲ್ಲಿ ನಲುಗಿದ್ದ ಅಸ್ಸೋಂನ ಹೈಲಕಂಡಿ ಇಂತಹುದೇ ಒಂದು ಅಪರೂಪದ ಮಾನವೀಯತೆಯ ಘಟನೆಗೆ ಸಾಕ್ಷಿಯಾಗಿದೆ.
ಕಳೆದ ವಾರ ಹೈಲಕಂಡಿಯಲ್ಲಿ ಕೋಮುಗಲಭೆ ನಡೆದು ಪರಿಸ್ಥಿತಿ ನಿಯಂತ್ರಣಕ್ಕೆ ಕರ್ಫ್ಯೂ ಹೇರಲಾಗಿತ್ತು. ಭಾನುವಾರದಂದು ಇದೇ ಪ್ರದೇಶದಲ್ಲಿ ನಂದಿತಾ ಎನ್ನುವ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಕೆಲವು ಕಿಲೋಮೀಟರ್ ದೂರದಲ್ಲಿದ್ದ ಎಸ್.ಕೆ.ರಾಯ್ ಆಸ್ಪತ್ರೆಗೆ ಆಕೆಯನ್ನು ದಾಖಲಿಸಲು ತುರ್ತಾಗಿ ವಾಹನದ ಅಗತ್ಯವಿತ್ತು.
ಕರ್ಫ್ಯೂ ಇದ್ದ ಕಾರಣದಿಂದ ಯಾವುದೇ ವಾಹನಗಳು ತಕ್ಷಣಕ್ಕೆ ದೊರೆಯುವುದು ಅಸಾಧ್ಯವಾಗಿತ್ತು. ಈ ವೇಳೆ ಆಕೆಯ ನೋವು ಸಹ ಹೆಚ್ಚಾಗಿತ್ತು. ನಂದಿತಾ ಪತಿ ರುಬನ್ ತನ್ನ ನೆರೆಮನೆಯ ಸ್ನೇಹಿತ ಹಾಗೂ ರಿಕ್ಷಾ ಡ್ರೈವರ್ ಮಖ್ಬೂಲ್ರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ತಕ್ಷಣವೇ ನಂದಿತಾಳನ್ನು ರಿಕ್ಷಾ ಡ್ರೈವರ್ ಮಖ್ಬೂಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಕರ್ಫ್ಯೂ ಇದ್ದರೂ ಲೆಕ್ಕಿಸದೇ ಅಟೋ ಚಲಾಯಿಸಿ ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಭಾನುವಾರ ಸಂಜೆ ವೇಳೆಗೆ ನಂದಿತಾಳಿಗೆ ಹೆರಿಗೆಯಾಗಿದ್ದು, ಹುಟ್ಟಿದ ಗಂಡು ಮಗುವಿಗೆ ಶಾಂತಿ ಎಂದು ಹೆಸರಿಡಲಾಗಿದೆ.
ಈ ಘಟನೆ ಗಲಭೆಯ ಹೊರತಾದ ಮಾನವೀಯ ಮುಖ ಹಾಗೂ ಕೋಮು ಸೌಹಾರ್ದತೆಯನ್ನು ಬಿಂಬಿಸಿದೆ. ಇಂತಹ ಕೋಮು ಸೌಹಾರ್ದತೆಯ ಘಟನೆಗಳು ಈ ಪ್ರದೇಶದಲ್ಲಿ ಇನ್ನಷ್ಟು ನಡೆಯಬೇಕು ಎಂದು ಸ್ಥಳೀಯರು ಆಶಿಸಿದ್ದಾರೆ. ’ಶಾಂತಿ’ ಮಗುವಿನಿಂದಾದರೂ ಹೈಲಕಂಡಿಯಲ್ಲಿ ಶಾಂತಿ ಸ್ಥಾಪನೆಯಾಗಲಿ ಎಂದು ಜನ ಬಯಸಿದ್ದಾರೆ.