ಬೆಂಗಳೂರು: ಕೋವಿಡ್-19 ವೈರಸ್ ಪಿಡುಗಿನಿಂದಾಗಿ ಈ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ನಡೆಸಲಾಗದೇ ಎಲ್ಲಾ 6.5 ಲಕ್ಷ ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡಲಾಗಿದೆ. ಆದರೆ ತೇರ್ಗಡೆಯಾಗಿರುವ ಆ ಎಲ್ಲಾ ವಿದ್ಯಾರ್ಥಿಗಳಿಗೆ ರಾಜ್ಯದಲ್ಲಿರುವ ಪದವಿ ಕಾಲೇಜುಗಳಲ್ಲಿ ಪ್ರವೇಶಾತಿ ನೀಡಲು ಸದ್ಯಕ್ಕೆ ಅವಕಾಶಗಳಿರುವುದಿಲ್ಲ.
ಜೊತೆಗೆ ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯವು ಇಡೀ ದೇಶದಲ್ಲೇ ಮುಂಚೂಣಿಯಲ್ಲಿರುವುದರಿಂದ, ಹೊರಗಿನ ರಾಜ್ಯದಿಂದಲೂ ಪ್ರವೇಶಾಕಾಂಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕರ್ನಾಟಕಕ್ಕೆ ಬರುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಪದವಿ ಕೋರ್ಸ್‌ಗಳಲ್ಲಿನ ಪ್ರವೇಶಾತಿ ಒತ್ತಡವನ್ನು ಸಮರ್ಥವಾಗಿ ನಿಭಾಯಿಸುವ ಗುರುತರ ಜವಾಬ್ದಾರಿ ಸರ್ಕಾರದ ಮೇಲಿದೆ ಅಂತ ಸರ್ಕಾರದ ಶಿಕ್ಷಣ ಸುಧಾರಣೆಗಳ ಸಲಹೆಗಾರರಾದ ಪ್ರೊ. ಎಂಆರ್ ದೊರೆಸ್ವಾಮಿ ಮನವಿ ಮಾಡಿದ್ದಾರೆ.
ಸರ್ಕಾರಕ್ಕೆ ಹಲವು ಶಿಫಾರಸ್ಸುಗಳನ್ನು ಸಲ್ಲಿಸಲಾಗಿದೆ. ಅದರಲ್ಲಿ ಮುಖ್ಯವಾಗಿ ಈ ಶೈಕ್ಷಣಿಕ ವರ್ಷಕ್ಕೆ ಮಾತ್ರ ಸೀಮಿತವಾಗಿರುವಂತೆ, ರಾಜ್ಯದಲ್ಲಿನ ಎಲ್ಲಾ ಸ್ವಾಯತ್ತ ಹಾಗೂ ಸಂಯೋಜಿತ ಕಾಲೇಜುಗಳಲ್ಲಿ (ಇಂಜಿನಿಯರಿಂಗ್ ಕಾಲೇಜುಗಳನ್ನೂ ಸಹ ಒಳಗೊಂಡಂತೆ) ಪ್ರಸ್ತುತ ಲಭ್ಯವಿರುವ ಪದವಿ ಕೋರ್ಸ್‌ಗಳ (BA,BSC,BCom,BBA,BSEM) ಪ್ರವೇಶಾತಿಗಾಗಿ ತಲಾ ಒಂದು ಹೆಚ್ಚುವರಿ ವಿಭಾಗ (Section) ಪ್ರಾರಂಭಿಸಲು ಅನುಮತಿ ಕೊಡಬಹುದು.
ಈ ಬಗ್ಗೆ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆಗಳಾಗದಂತೆ, ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಿಗೆ ಸೂಕ್ತ ನಿರ್ದೇಶನವನ್ನು ನೀಡುವುದು. ಅಂತಿಮವಾಗಿ, ರಾಜ್ಯ ಸರ್ಕಾರವೇ ನಿಯಂತ್ರಣ ಪ್ರಾಧಿಕಾರವಾಗಿರುವುದರಿಂದ, ಪಿ.ಯು.ಸಿ. ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ ಯಾವೊಬ್ಬ ವಿದ್ಯಾರ್ಥಿಯು ಸಹ ಉನ್ನತ ಶಿಕ್ಷಣ ಮುಂದುವರೆಕೆಯ ಅವಕಾಶದಿಂದ ವಂಚಿತರಾಗದಂತೆ ಸರ್ಕಾರವು ಕ್ರಮ ಕೈಗೊಳ್ಳಬೇಕೆಂಬುದೇ ತಿಳಿಸಿದ್ದಾರೆ.