ವಿಜಯಪುರ: ಮಹಾಮಾರಿ ಕೊರೊನಾದಿಂದ ಕಳೆದ 8 ತಿಂಗಳಿಂದ ಬಂದ್ ಆಗಿದ್ದ ರಾಜ್ಯದ ಏಕೈಕ ಮಹಿಳಾ ವಿವಿಯಾದ ಅಕ್ಕಮಹಾದೇವಿ ವಿಶ್ವವಿದ್ಯಾಲಯ ಇದೇ ನವೆಂಬರ್ 17 ರಿಂದ ತನ್ನ ಎಲ್ಲ ಕಾರ್ಯಾ ಚಟುವಟಿಕೆಗಳನ್ನು ಪುನಃ ಆರಂಭಗೊಳಿಸಲಿದೆ.
ಪದವಿ, ಸ್ನಾತಕೋತ್ತರ ಪದವಿ ಪಾಠಗಳು ಎಂದಿನಂತೆ ಆರಂಭಗೊಳ್ಳಲಿವೆ ಎಂದು ಹಂಗಾಮಿ ಕುಲಪತಿ ಡಾ. ಓಂಕಾರ ಕಾಕಡೆ ತಿಳಿಸಿದ್ದಾರೆ.
ಅಕ್ಕ ಮಹಾದೇವಿ ವಿಶ್ವವಿದ್ಯಾಲಯ ವ್ಯಾಪ್ತಿಗೆ ಬರುವ ಎಲ್ಲ ಕಾಲೇಜುಗಳು, ಮಂಡ್ಯ, ಸಿಂಧನೂರು, ಉಡತಡಿ ಮಹಿಳಾ ವಿವಿ ಕ್ಯಾಂಪಸ್‍ಗಳು ಆರಂಭಗೊಳ್ಳಲಿವೆ. ಈ ಸಂಬಂಧ ಎಲ್ಲ ಕಾಲೇಜು ಪ್ರಾಂಶುಪಾಲರಿಗೆ, ಉಪನ್ಯಾಸಕರಿಗೆ ಸೂಚನೆ ನೀಡಲಾಗಿದೆ. ಇದರ ಜತೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲು ಸಹ ಅಧಿಸೂಚನೆ ಹೊರಡಿಸಲಾಗಿದೆ.
ಮಹಿಳಾ ವಿವಿ ವ್ಯಾಪ್ತಿಯ ಎಲ್ಲ ಕಾಲೇಜುಗಳ ಆವರಣ, ತರಗತಿಗಳನ್ನು ಶುಚಿಯಾಗಿಡಲು ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗಿದೆ. ಕೋವಿಡ್-19 ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ವಿದ್ಯಾರ್ಥಿನಿಯರು ಸಹ ನವೆಂಬರ್ 17ರಿಂದ ಎಂದಿನಂತೆ ತರಗತಿಗಳಿಗೆ ಹಾಜರಾಗಬೇಕು ಎಂದು ಸೂಚನೆ ನೀಡಲಾಗಿದೆ. ಉಪನ್ಯಾಸಕರು, ಪ್ರಾಚಾರ್ಯರು, ವಿದ್ಯಾರ್ಥಿನಿಯರು ಸ್ಯಾನಿಟೈಸರ್, ಮಾಸ್ಕ್ ಬಳಸುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.