ಗದಗ: ಲಕ್ಕಿ ಡ್ರಾ ಹೆಸರಿನಲ್ಲಿ ಗದಗ ಜಿಲ್ಲೆಯ ಜನರಿಗೆ ಕೋಟ್ಯಂತರ ರೂಪಾಯಿ ಪಂಗನಾಮ ಹಾಕಿರುವ ಘಟನೆ ನಡೆದಿದೆ. ಗದಗ ಜಿಲ್ಲೆಯ ರೋಣ ಪಟ್ಟಣದಲ್ಲಿ ಸೋಮನಗೌಡ ಪಾಟೀಲ್ ಎಂಬುವವರು ಪ್ರಗತಿ ಬಂಧು ಸಂಸ್ಥೆ ಹೆಸರಿನ ಮೂಲಕ ಲಾಟರಿ ವ್ಯವಹಾರ ನಡೆಸುತ್ತಿದ್ದರು ಎನ್ನಲಾಗಿದೆ.
ಪ್ರಗತಿ ಬಂಧು ಹೋಮ್ ಅಪ್ಲಾಯನ್ಸ್ ಸ್ಕೀಮ್ ಹೆಸರಲ್ಲಿ ಜನರಿಗೆ ಕೋಟಿ ಕೋಟಿ ಮೋಸ ಮಾಡಲಾಗಿದೆ. ಜನರಿಗೆ ಕಾರ್, ಟ್ರ್ಯಾಕ್ಟರ್, ಆಟೋ, ಚಿನ್ನಾಭರಣ, ಟಿವಿ, ವಾಶಿಂಗ್ ಮಷಿನ್, ರೇಫ್ರಿಜರೇಟರ್, ಬೈಕ್ ಹೀಗೆ ಹತ್ತಾರು ರೀತಿಯ ಆಕರ್ಷಕ ವಸ್ತುಗಳನ್ನು ನೀಡುವ ಲಾಟರಿ ಸ್ಕೀಮ್ ಮಾಡಿದ್ದಾರೆ.
ಹಳ್ಳಿ ಜನರನ್ನೇ ಟಾರ್ಗೆಟ್ ಮಾಡಿ ಕಡಿಮೆ ಹಣದಲ್ಲಿ ಬೆಲೆ ಬಾಳುವ ವಸ್ತುಗಳನ್ನು ಕೊಡುವುದಾಗಿ ಹೇಳಿ ನಾಮ ಹಾಕಿದ್ದಾನೆ. ಜಿಲ್ಲೆಯಲ್ಲಿ 59,899 ಸದಸ್ಯರನ್ನು ಈ ಸಂಸ್ಥೆ ಹೊಂದಿದೆ. 1250 ರೂಪಾಯಿ ಸದಸ್ಯತ್ವ ಶುಲ್ಕ ಮಾಡಿದ್ದು, ಆರಂಭದಲ್ಲಿ 650 ರೂಪಾಯಿ ಆರಂಭಿಕ ಶುಲ್ಕ ಎಂದು ವಸೂಲಿ ಮಾಡಲಾಗಿದೆ.
ಹೀಗಾಗಿ ಅಂದಾಜು 3-4 ಕೋಟಿ ಶುಲ್ಕ ವಸೂಲಿಯಾಗಿದೆ ಎನ್ನಲಾಗಿದೆ. ಜೂನ್ 9ರಂದು ಲಾಟರಿ ಆಯ್ಕೆ ಮಾಡಲಾಗಿದೆ. ಆಗ ಯಾರಿಗೂ ಲಕ್ಕಿ ಡ್ರಾನಲ್ಲಿ ನಂಬರ್ ಬಂದಿಲ್ಲ. ಆಗ ಮೋಸ ಅಂತ ಗೊತ್ತಾದ ಬಳಿಕ ಜನರು ಏಜೆಂಟರು ಹಾಗೂ ಮಾಲೀಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಆಗ ನಾಪತ್ತೆಯಾಗಿದ್ದ ವಂಚಕ ಸೋಮನಗೌಡನನ್ನು ರೋಣ ಪೊಲೀಸರು ಬಂಧಿಸಿದ್ದಾರೆ.
ಇಂತಹ ಮೋಸದ ಜಾಲಕ್ಕೆ ಸಾರ್ವಜನಿಕರು ಸಿಲುಕಬಾರದು. ಅಂತಹ ಘಟನೆಗಳು ನಡೆದರೆ ಅವುಗಳನ್ನು ಪೊಲೀಸ್ ಇಲಾಖೆಗೆ ತಿಳಿಸಬೇಕು ಎಂದು ಗದಗ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ ಜೋಶಿ ಹೇಳಿದ್ದಾರೆ.