ಬೆಂಗಳೂರು: ಅಧಿಕೃತ ನಿವಾಸ ಕಾವೇರಿಯಲ್ಲಿ ಬಿಜೆಪಿಯ ಕೆಲ ಶಾಸಕರು ಮುಖ್ಯಮಂತ್ರಿ ಯಡಿಯೂರಪ್ಪರನ್ನು ಭೇಟಿಯಾಗಿ ಮತ್ತೊಂದು ಆರ್ಥಿಕ ಪ್ಯಾಕೇಜ್ ನೀಡುವಂತೆ ಮನವಿ ಮಾಡಿದರು. ಜೊತೆಗೆ, ಸಿಎಂಗೆ ನಿಮ್ಮೊಂದಿಗೆ ನಾವಿದ್ದೇವೆ ಎಂಬ ಅಭಯವನ್ನು ನೀಡಿದ್ದಾರೆ.
ಸಿಎಂರನ್ನು ಭೇಟಿಯಾದ ಬಿಜೆಪಿ ಶಾಸಕರ ನಿಯೋಗ, ರಾಜ್ಯದ ಕೊರೊನಾ ಫ್ರಂಟ್ ಲೈನ್ ವಾರಿಯರ್ಸ್ ಗಳಾದ ಆಶಾ ಕಾರ್ಯಕರ್ತೆಯರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ, ಪಂಚಾಯತ್ ಸಿಬ್ಬಂದಿ, ದೇವಸ್ಥಾನದ ಪುರೋಹಿತರು, ಅನುದಾನರಹಿತ ಶಾಲೆಗಳ ಶಿಕ್ಷಕರಿಗೆ ಪ್ಯಾಕೇಜ್ ಗಳನ್ನು ನೀಡುವಂತೆ ಮನವಿ ಮಾಡಿದ್ದಾರೆ.
ಭೇಟಿ ಬಳಿಕ ಮಾತನಾಡಿದ ರೇಣುಕಾಚಾರ್ಯ, ನಮ್ಮನ್ನು ಯಾರೂ ಕರೆದಿಲ್ಲ. ಪಕ್ಷದ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಕರೆಸಿದ್ರು ಅಂತ ಯಾರು ಹೇಳಬೇಡಿ. ನಾವೇ ಬಂದು ಸಿಎಂ ಜೊತೆ ಮಾತಾಡಿದ್ದೇವೆ. 18 ಜನ ಶಾಸಕರು ಸಿಎಂ ಭೇಟಿ ಮಾಡಿ ಕ್ಷೇತ್ರದ ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಕೋವಿಡ್ ನಿರ್ವಹಣೆ ಬಗ್ಗೆ ಮಾಡಿರೋ ಕೆಲಸದ ಬಗ್ಗೆ ತಿಳಿಸಿದ್ದೇವೆ. ದಿನಕ್ಕೆ 18 ಗಂಟೆ ಕೆಲಸ ಮಾಡ್ತಿದ್ದೇವೆ. ಕೊರೊನಾ ರೋಗಿಗಳು, ಕೇರ್ ಸೆಂಟರ್ ನಲ್ಲಿ ಕೆಲಸ ಮಾಡ್ತಿದ್ದೇವೆ. ಲಸಿಕೆ ಹಾಕಿಸೋರಿಗೆ ಊಟ ಉಪಹಾರ ವ್ಯವಸ್ಥೆ ಮಾಡ್ತಿದ್ದೇವೆ. ಕ್ಷೇತ್ರದಲ್ಲಿ ಆಕ್ಸಿಜನ್ ಘಟಕ ಸ್ಥಾಪನೆ ಮಾಡಿದ್ದೇವೆ ಎಂದರು.
ಆಕ್ಸಿಜನ್ ಕಾನ್ಸಂಟ್ರೇಟ್ ಗಳನ್ನು ಕ್ಷೇತ್ರದಲ್ಲಿ ಕೊಟ್ಟಿದ್ದೇವೆ. ಕ್ಷೇತ್ರದ ಕಾವಲುಗಾರರಾಗಿ, ಕೊರೊನಾ ವಿರುದ್ಧ ತೊಡೆ ತಟ್ಟಿ ಕೆಲಸ ಮಾಡುತ್ತಿದ್ದೇವೆ. ನಮ್ಮ ಕ್ಷೇತ್ರದ ಬಗ್ಗೆ ನಾವು ಮಾಡಿದ ಕೆಲಸದ ಬಗ್ಗೆ ಸಿಎಂಗೆ ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದು ರೇಣುಕಾಚಾರ್ಯ ಹೇಳಿದರು.
ಕ್ಷೇತ್ರಕ್ಕೆ ಸಹಕಾರ ಕೊಡಬೇಕು ನಿಮ್ಮ ಜೊತೆ ನಾವಿದ್ದೇವೆ ಅಂತ ಸಿಎಂಗೆ ತಿಳಿಸಿದ್ದೇವೆ. ಪ್ರಧಾನಿ, ಮುಖ್ಯಮಂತ್ರಿಗಳು ಕೊರೊನಾ ಸಂದರ್ಭ ಉತ್ತಮವಾಗಿ ಕೆಲಸ ಮಾಡ್ತಿದ್ದಾರೆ. ಇದನ್ನು ಮುಂದುವರಿಸಬೇಕು ಅಂತ ಮನವಿ ಮಾಡಿದ್ದೇವೆ. ಇನ್ನೂ ಎರಡು ವರ್ಷಗಳ ಕಾಲ ಹೀಗೆ ಕೆಲಸ ಮಾಡಿದ್ರೆ 2008ರಲ್ಲಿ ಇದ್ದಂತಹ ವರ್ಚಸ್ಸು ಬರುತ್ತದೆ. ಅನೇಕ ಜನರಿಗೆ ಪ್ಯಾಕೇಜ್ ತಪ್ಪಿದೆ. ಇದನ್ನು ಘೋಷಣೆ ಮಾಡುವಂತೆ ಸಿಎಂಗೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.