ನವದೆಹಲಿ: ಪಾನಮತ್ತರಾಗಿದ್ದ ಪೊಲೀಸ್ ಕಾನ್ಸ್‌ಟೇಬಲ್ ಕಾರು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಝೊಮಾಟೋ ಡೆಲಿವರಿ ಬಾಯ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ದೆಹಲಿಯ ರೋಹಿಣಿಯ ಬುಧ್ ವಿಹಾರ್ ಪ್ರದೇಶದಲ್ಲಿ ನಿನ್ನೆ(ಭಾನುವಾರ) ರಾತ್ರಿ ಈ ಘಟನೆ ನಡೆದಿದೆ.
ಸಲೀಲ್ ತ್ರಿಪಾಠಿ ಮೃತ ವ್ಯಕ್ತಿ. ಘಟನೆಯ ಕುರಿತು ವಿವರ ನೀಡಿದ ದೆಹಲಿ ಪೊಲೀಸರು, ದೆಹಲಿಯ ರೋಹಿಣಿ ಪ್ರದೇಶದ ಬುಧ್ ವಿಹಾರ್‌ನಲ್ಲಿರುವ ಬಾಬಾ ಸಾಹೇಬ್ ಅಂಬೇಡ್ಕರ್ ಆಸ್ಪತ್ರೆಯ ಮುಂಭಾಗದಲ್ಲಿ ಡಿಟಿಸಿ ಬಸ್ ಮತ್ತು ಬೈಕ್ ಸವಾರನಿಗೆ ಕಾರೊಂದು ಡಿಕ್ಕಿ ಹೊಡೆದಿದೆ. ಈ ಕಾರನ್ನು ದೆಹಲಿ ಪೊಲೀಸ್ ಕಾನ್ಸ್‌ಟೇಬಲ್ ಮಹೇಂದ್ರ ಅವರು ಚಲಾಯಿಸುತ್ತಿದ್ದರು.
ಅವರು ರೋಹಿಣಿಯ ಉತ್ತರ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸಲು ತೆರಳುವ ವೇಳೆ ಅತಿಯಾಗಿ ಪಾನಮತ್ತನಾಗಿದ್ದು, ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಗಳು ಅಪಘಾತದ ವೇಳೆ ಕಾನ್ಸ್‌ಟೇಬಲ್ ಕಂಠಪೂರ್ತಿ ಕುಡಿದಿರುವುದನ್ನು ವಿಡಿಯೋ ಮಾಡಿದ್ದು, ಪೊಲೀಸರಿಗೆ ಒಪ್ಪಿಸಿದ್ದಾರೆ.
ಮೃತ ಸಲೀಲ್ ತ್ರಿಪಾಠಿ ತಂದೆ ಕಳೆದ ವರ್ಷ ಮಾರಣಾಂತಿಕ ಕೋವಿಡ್ 2ನೇ ಅಲೆಯ ಸಂದರ್ಭದಲ್ಲಿ ಸೋಂಕಿಗೆ ಬಲಿಯಾಗಿದ್ದು, ಈತನೇ ಕುಟುಂಬಕ್ಕೆ ಆಧಾರವಾಗಿದ್ದ. ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದು, ಕಾನ್ಸ್‌ಟೇಬಲ್ ಮಹೇಂದ್ರನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಉಪ ಆಯುಕ್ತ (ಡಿಸಿಪಿ) ಪ್ರಣವ್ ತಾಯಲ್ ತಿಳಿಸಿದ್ದಾರೆ.
ಇನ್ನು ಮೃತ ವ್ಯಕ್ತಿಯ ಕುಟುಂಬಕ್ಕೆ ಕಂಪನಿಯು ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡಿದೆ ಎಂದು ಝೊಮಾಟೊ ವಕ್ತಾರರು ತಿಳಿಸಿದ್ದಾರೆ.
ಇದನ್ನೂ ಓದಿ: ಹಿಮಪಾತದ ನಡುವೆ ಕಾಶ್ಮೀರದಲ್ಲಿ ಭದ್ರತಾ ಪಡೆ - ಉಗ್ರರ ನಡುವೆ ಗುಂಡಿನ ಚಕಮಕಿ