ಪಾಲ್ಘರ್ (ಮಹಾರಾಷ್ಟ್ರ) : ಏಕದಿನ ವಿಶ್ವಕಪ್ ಸೋಲಿನ ನಿರಾಸೆಯ ಮಧ್ಯೆ ಹಲವಾರು ಆಘಾತಕಾರಿ ಘಟನೆಗಳು ಹೊರ ಬರುತ್ತಿವೆ. ಭಾರತ ಕ್ರಿಕೆಟ್ ತಂಡದ ಸೋಲು- ಗೆಲುವಿನ ಕಿತ್ತಾಟದಲ್ಲಿ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿದ ಪ್ರಕರಣ ಮಹಾರಾಷ್ಟ್ರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದರೂ ಆರೋಪಿಗಳನ್ನು ಬಂಧಿಸಲಾಗಿಲ್ಲ.
ಇಲ್ಲಿನ ಪಾಲ್ಘರ್ ಜಿಲ್ಲೆಯಲ್ಲಿ ವಿಶ್ವಕಪ್ ಫೈನಲ್ ಪಂದ್ಯದಂದು ಯುವಕರ ಮಧ್ಯೆ ಭಾರತ ತಂಡ ಸೋಲುತ್ತದೆ, ಗೆಲ್ಲುತ್ತದೆ ಎಂಬ ವಿಷಯವಾಗಿ ಹೊಡೆದಾಟ ನಡೆದಿದೆ. ಈ ವೇಳೆ, ಗುಂಪೊಂದು ಪ್ರವೀಣ್ ರಾಠೋಡ್ ಎಂಬಾತನ ಮೇಲೆ ಮಾರಣಾಂತಿಕ ದಾಳಿ ಮಾಡಿದೆ. ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕ ನವೆಂಬರ್ 23 ರಂದು ಸಾವಿಗೀಡಾಗಿದ್ದ. ನವೆಂಬರ್ 29 ರಂದು ಎಫ್ಐಆರ್ ದಾಖಲಿಸಲಾಗಿದೆ. ಆದರೆ, ಈವರೆಗೆ ಆರೋಪಿಗಳನ್ನು ಬಂಧಿಸಲಾಗಿಲ್ಲ ಎಂದು ಸಂತ್ರಸ್ಥನ ಕುಟುಂಬಸ್ಥರು ಹೇಳಿದ್ದಾರೆ.
ಘಟನೆಯ ವಿವರ: ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ವಿಶ್ವಕಪ್ ಫೈನಲ್ ಪಂದ್ಯದಂದು ಪ್ರವೀಣ್ ರಾಠೋಡ್ ಹೇರ್ ಸಲೂನ್ನಲ್ಲಿ ಪಂದ್ಯ ವೀಕ್ಷಿಸುತ್ತಾ ಕಟಿಂಗ್ ಮಾಡಿಸಿಕೊಳ್ಳಲು ಕುಳಿತಿದ್ದ. ಈ ವೇಳೆ ಆರೋಪಿಗಳಾದ ಮನೋಜ್ ಗಿರಿ, ಪ್ರತೀಕ್ ಗಿರಿ ಎಂಬಿಬ್ಬರು 'ನಿನ್ನ ಭಾರತ ಪಂದ್ಯದಲ್ಲಿ ಇಂದು ಸೋಲುತ್ತದೆ' ಎಂದು ಕಿಚಾಯಿಸಿದ್ದಾರೆ. ಅದಕ್ಕೆ ಪ್ರವೀಣ್ ಭಾರತ ಗೆಲ್ಲುತ್ತದೆ ಎಂದು ಖಡಕ್ಕಾಗಿ ಪ್ರತಿಕ್ರಿಯೆ ನೀಡಿದ್ದಾನೆ. ಇದು ಇಬ್ಬರ ಮಧ್ಯೆ ಕಿತ್ತಾಟಕ್ಕೆ ಕಾರಣವಾಗಿದೆ.
ಬಳಿಕ ಆರೋಪಿಗಳು ತಮ್ಮ ಇತರ ಸ್ನೇಹಿತರನ್ನು ಸ್ಥಳಕ್ಕೆ ಕರೆಯಿಸಿಕೊಂಡು ಪ್ರವೀಣ್ ಮೇಲೆ ಮುಗಿಬಿದ್ದು ಥಳಿಸಿದ್ದಾರೆ. ಇಷ್ಟಕ್ಕೆ ಬಿಡದ ಆರೋಪಿಗಳ ಗುಂಪು ಸಲೂನ್‌ನಲ್ಲಿದ್ದ ಕುರ್ಚಿಯಿಂದ ಪ್ರವೀಣ್ ತಲೆಗೆ ಬಲವಾಗಿ ಹೊಡೆದಿದ್ದಾರೆ. ಇದರಿಂದ ಆತ ತೀವ್ರವಾಗಿ ಗಾಯಗೊಂಡಿದ್ದ. ವಿಷಯ ತಿಳಿದ ಸಂಬಂಧಿಗಳು ಸಂತ್ರಸ್ಥನನ್ನು ಬೋಯ್ಸರ್ ಆಸ್ಪತ್ರೆಯಲ್ಲಿ ದಾಖಲಿಸಿದರು. ಸ್ಥಿತಿ ಗಂಭೀರವಾದ ಕಾರಣ, ಮೀರಾ ರೋಡ್‌ನಲ್ಲಿರುವ ತುಂಗಾ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ತೀವ್ರ ರಕ್ತಸ್ರಾವಕ್ಕೀಡಾಗಿದ್ದ ಪ್ರವೀಣ್ ನವೆಂಬರ್ 23 ರಂದು ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ.
ಕುಟುಂಬಸ್ಥರಿಂದ ದೂರು: ಕ್ರಿಕೆಟ್ಗಾಗಿ ಪ್ರವೀಣ್ ಮೇಲೆ ಹಲ್ಲೆ ಮಾಡಿದ ಗುಂಪಿನ ವಿರುದ್ಧ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ನವೆಂಬರ್ 29 ರಂದು ಆರೋಪಿಗಳ ಮೇಲೆ ಎಫ್ಐಆರ್ ಕೂಡ ಹಾಕಲಾಗಿದೆ. ಕಲಂ 302 (34) ಅಡಿ ಕೊಲೆ ಪ್ರಕರಣವನ್ನು ದಾಖಲಿಸಲಾಗಿದೆ. ಆದರೆ, ಪ್ರಮುಖ ಆರೋಪಿಗಳಾದ ಮನೋಜ್ ಗಿರಿ, ಪ್ರತೀಕ್ ಗಿರಿ ಮತ್ತಿಬ್ಬರನ್ನು ಇದುವರೆಗೂ ಬಂಧಿಸಿಲ್ಲ.
ಪ್ರಕರಣದ ತನಿಖೆಯನ್ನು ಪೊಲೀಸರು ನಡೆಸುತ್ತಿದ್ದಾರೆ. ಆರೋಪಿಗಳ ಪತ್ತೆ ಕಾರ್ಯ ಮಾಡಲಾಗುತ್ತಿದೆ. ಶೀಘ್ರದಲ್ಲೇ ಅವರನ್ನು ಹಿಡಿದು ಶಿಕ್ಷಿಸಲಾಗುವುದು ಎಂದು ಪೊಲೀಸ್ ಅಧಿಕಾರಿ ರವಿ ರಾಥೋಡ್ ತಿಳಿಸಿದ್ದಾರೆ.
ಇದನ್ನೂ ಓದಿ: ಮಧ್ಯಾಹ್ನದ ಊಟ ಸೇವಿಸಿ 35ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ; ಮುಂದುವರಿದ ಚಿಕಿತ್ಸೆ