ಮಲ್ಕನ್ಗಿರಿ (ಒಡಿಶಾ): ಸಮಾಜಕ್ಕೆ ತಮ್ಮ ಕೊಡುಗೆ ನೀಡಿ, ಪ್ರಗತಿಪರ ಕ್ರಮಗಳನ್ನ ಕೈಗೊಳ್ಳುವ ಉದ್ದೇಶದಿಂದ ಸುಮಾರು ಇಪ್ಪತ್ತರಿಂದ ಮೂವತ್ತು ಯುವತಿಯರು ಸೇರಿ ಮಲ್ಕನ್ಗಿರಿಯ ಕಲಾ ಕಾಲೇಜಿನ ಬಳಿ ಗ್ರಂಥಾಲಯ ತೆರೆದಿದ್ದಾರೆ.
ಒಡಿಶಾದ ಬುಡಕಟ್ಟು ಪ್ರಾಬಲ್ಯದ ಜಿಲ್ಲೆಯಿಂದ ಬಂದಿರುವ ಈ ಯುವತಿಯರು, ಜನರು ಹೆಚ್ಚಿನ ಸಮಯವನ್ನು ಫೋನ್ ಬಳಕೆಯಲ್ಲಿ ಕಳೆಯುತ್ತಿದ್ದು, ಜನರು ಪುಸ್ತಕಗಳನ್ನು ಓದಬೇಕೆಂಬ ಸದುದ್ದೇಶದಿಂದ ಈ ಗ್ರಂಥಾಲಯ ಸ್ಥಾಪನೆಗೆ ಮುಂದಾಗಿದ್ದಾರೆ.
ದೀಪಾವಳಿಯಂದು ಉದ್ಘಾಟನೆಯಾದ ರಸ್ತೆಬದಿಯ ಗ್ರಂಥಾಲಯದಲ್ಲಿ ಪ್ರಸ್ತುತ ಹೆಚ್ಚಿನ ಪುಸ್ತಕಗಳಿಲ್ಲದಿದ್ದರೂ, ಜನರು ಪುಸ್ತಕಗಳನ್ನು ದಾನ ಮಾಡುವುದರೊಂದಿಗೆ ಇದನ್ನು ನಿಧಾನವಾಗಿ ಅಭಿವೃದ್ಧಿಪಡಿಸುತ್ತಿದ್ದಾರೆ.
ಈ ಗ್ರಂಥಾಲಯವು ಬೆಳಗ್ಗೆ 6-11 ರಿಂದ ಮತ್ತು ಮತ್ತೆ ಸಂಜೆ 3-9 ಗಂಟೆಯ ವರೆಗೆ ತೆರೆಯಲಾಗುತ್ತಿದ್ದು, ನಾಲ್ಕು ಯುವತಿಯರು ಇದರ ನಿರ್ವಹಣೆ ಮಾಡಲಿದ್ದಾರೆ. ಗ್ರಂಥಾಲಯ ನಿರ್ಮಾಣ ಮತ್ತು ನಿರ್ವಹಣೆಯ ವೆಚ್ಚವನ್ನು ಸಮೂಹದ ಸದಸ್ಯರು ಭರಿಸುತ್ತಿದ್ದಾರೆ.
ನಮ್ಮ ಸಂಸ್ಕೃತಿಯನ್ನು ಮುಂದುವರಿಸಲು ಗ್ರಂಥಾಲಯಗಳು ಬಹಳ ಮುಖ್ಯವಾಗಿದ್ದು, ಈ ಕುರಿತಾದ ಯುವತಿಯರ ಹೆಜ್ಜೆ ಇಂದಿನ ಯುವ ಪೀಳಿಗೆಗೆ ನಮ್ಮ ಸಂಸ್ಕೃತಿ, ಸಾಹಿತ್ಯ ಮತ್ತು ಇತಿಹಾಸವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಅಪಾರ ಸಹಾಯ ಮಾಡುತ್ತದೆ ಎಂದು ಈ ಯುವತಿಯರು ನಿರ್ಧರಿಸಿದ್ದಾರೆ.