ಸೀತಾಮರ್ಹಿ: ದೆಹಲಿ ಮಾದರಿಯಲ್ಲೇ ಮತ್ತೊಂದು ಹೃದಯ ವಿದ್ರಾವಕ ಘಟನೆ ಬಿಹಾರದ ಸೀತಾಮರ್ಹಿಯಲ್ಲಿ ನಡೆದಿದೆ. ತನ್ನನ್ನು ಮದುವೆಯಾಗಲು ನಿರಾಕರಿಸಿದಳು ಎಂದು ದುರುಳನೊಬ್ಬ 20 ವರ್ಷದ ಯುವತಿಗೆ ಚಾಕುವಿನಿಂದ 12 ಬಾರಿ ಇರಿದಿರುವ ಘಟನೆ ಸೋಮವಾರ ತಡರಾತ್ರಿ ನಡೆದಿದೆ. ಕುಟುಂಬಸ್ಥರು ಯುವತಿಯನ್ನು ಸೀತಾಮರ್ಹಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾಳೆ. ಚಾಕುವಿನಿಂದ ದಾಳಿ ಮಾಡಿದ ನಂತರ ಯುವಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಆದರೆ ಘಟನೆ ನಡೆದ ಏಳು ಗಂಟೆಗಳಲ್ಲಿ ಎಸ್ಪಿ ಮನೋಜ್ ಕುಮಾರ್ ತಿವಾರಿ ಅವರ ಸೂಚನೆಯಂತೆ ಪರಿಹಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಜಗದರ್ ಗ್ರಾಮದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಯುವಕನನ್ನು ದಿಗ್ಗಿ ಪಂಚಾಯತ್‌ನ ಹರಿಬೆಳ ಗ್ರಾಮದ ರಮೇಶ್ ಶಾ ಎಂಬವರ ಪುತ್ರ ಚಂದನ್ ಕುಮಾರ್ (22) ಎಂದು ಗುರುತಿಸಲಾಗಿದೆ.
ಯುವತಿ ಮಾರುಕಟ್ಟೆಯಿಂದ ಮನೆಗೆ ಹಿಂತಿರುಗುತ್ತಿದ್ದ ವೇಳೆ ಆರೋಪಿ ಚಂದನ್ ಕುಮಾರ್, ಆತನನ್ನು ನಿರಾಕರಿಸುತ್ತಿರುವುದಕ್ಕೆ ಕಾರಣವನ್ನು ಕೇಳಿ ಮೊದಲು ಅವಳೊಂದಿಗೆ ವಾಗ್ವಾದಕ್ಕಿಳಿದು ನಂತರ ಚಾಕುವಿನಿಂದ ಇರಿದಿದ್ದಾನೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕುಮಾರ್ ಸ್ಥಳದಿಂದ ಪರಾರಿಯಾಗಿದ್ದಾನೆ. ಮಹಿಳೆಯ ಹೊಟ್ಟೆ, ಎದೆ, ತೊಡೆ ಮತ್ತು ಕುತ್ತಿಗೆಗೆ ಗಾಯಗಳಾಗಿವೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ಅಶೋಕ್ ಕುಮಾರ್ ಸಿಂಗ್ ಮಾಹಿತಿ ನೀಡಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ತಿವಾರಿ ಮಾಹಿತಿ ನೀಡಿ, ಕುಮಾರ್ ಯುವತಿಯನ್ನು ಕೊಲ್ಲುವುದಕ್ಕಾಗಿ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಪ್ರಾಥಮಿಕ ವಿಚಾರಣೆ ನಡೆಸಲಾಗಿದ್ದು, ಇಬ್ಬರು ನಾಲ್ಕು ವರ್ಷಗಳಿಂದ ಪರಸ್ಪರ ಪರಿಚಿತರು. ಮನೆಯವರು ಒತ್ತಡದ ಮೇರೆಗೆ ಯುವತಿ ಕುಮಾರ್ ಜೊತೆ ಮಾತನಾಡುವುದನ್ನು ನಿಲ್ಲಿಸಿದ್ದಾಳೆ. ಇದರಿಂದ ಕೋಪಗೊಂಡಿದ್ದ ಕುಮಾರ್ ಆರು ತಿಂಗಳುಗಳ ಹಿಂದೆ ಆಕೆಯ ಖಾಸಗಿ ಫೋಟೋಗಳು ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದನು. ಈ ಬಗ್ಗೆ ಯುವತಿಯ ಮನೆಯವರು ಪೊಲೀಸರಿಗೆ ದೂರು ಕೂಡ ನೀಡಿದ್ದರು. ಈ ಬಗ್ಗೆ ಮನೆಯವರು ಮಾತುಕತೆ ನಡೆಸಿ, ಯುವತಿ ಕುಮಾರ್ ಜೊತೆಗಿನ ಸಂಬಂಧವನ್ನು ಸಂಪೂರ್ಣವಾಗಿ ನಿಲ್ಲಿಸಿದ್ದು, ಮಾತ್ರವಲ್ಲದೆ ಮದುವೆಯಾಗುವುದಕ್ಕೂ ನಿರಾಕರಿಸಿದ್ದಳು ಎಂದು ತಿಳಿಸಿದರು.
ಗಾಯಗೊಂಡ ಯುವತಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಪ್ರಕರಣದ ಬಗ್ಗೆ ಮಾಹಿತಿ ಬಂದ ತಕ್ಷಣ ಪೊಲೀಸರು ಕ್ರಮ ಕೈಗೊಂಡು ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಮನೋಜ್ ಕುಮಾರ್ ತಿವಾರಿ ತಿಳಿಸಿದ್ದಾರೆ.
ದೆಹಲಿಯ ಘಟನೆ ಏನು?: ಇತ್ತೀಚೆಗೆ ದೆಹಲಿ ಶಹಬಾದ್ ಡೈರಿ ಪ್ರದೇಶದಲ್ಲಿ ಯುವಕನೋರ್ವ 16 ವರ್ಷದ ಬಾಲಕಿಗೆ 20 ಬಾರಿ ಚಾಕುವಿನಿಂದ ಇರಿದು, ಸೈಜು ಕಲ್ಲನ್ನು ತಲೆ ಮೇಲೆ ಎತ್ತಿ ಹಾಕಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ನಡೆದಿತ್ತು. ಘಟನೆಯ ವಿಡಿಯೋ ಹತ್ತಿರದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೈರಲ್ ಆಗಿತ್ತು. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: 'ಹತ್ಯೆ ಬಗ್ಗೆ ಪಶ್ಚಾತ್ತಾಪವಿಲ್ಲ': ಬಾಲಕಿ ಹಂತಕ ಸಾಹಿಲ್ ಖಾನ್ ಹೇಳಿಕೆ, 2 ದಿನ ಪೊಲೀಸ್ ಕಸ್ಟಡಿಗೆ