ಬಿಲಾಸ್‌ಪುರ(ಛತ್ತೀಸ್ಗಢ): ಯುವಕನೋರ್ವ ಮನೆಗೆ ನುಗ್ಗಿ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯನನ್ನು ಕೊಂದು ಹಾಕಿರುವ ಘಟನೆ ಛತ್ತೀಸ್ಗಢದ ಬಿಲಾಸ್‌ಪುರದಲ್ಲಿ ನಡೆದಿದೆ. 61 ವರ್ಷದ ಪ್ರದೀಪ್ ಶ್ರೀವಾಸ್ತವ ಕೊಲೆಯಾದ ಪ್ರಾಂಶುಪಾಲ. ಆರೋಪಿ ಉಪೇಂದ್ರ ಕೌಶಿಕ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಗುರುವಾರ ತಡರಾತ್ರಿ ಪ್ರದೀಪ್ ಶ್ರೀವಾಸ್ತವ ಅವರ ಮನೆಗೆ ಬಂದ ಯುವಕ ಸುತ್ತಿಗೆಯಿಂದ ಹೊಡೆದು, ಬ್ಲೇಡ್‌ನಿಂದ ಕೊಯ್ದು ದುಷ್ಕೃತ್ಯ ಎಸಗಿದ್ದಾನೆ.
ಕೊಲೆಗೆ ಕಾರಣವೇನು?: ಇಲ್ಲಿನ ಪಚಪೇಡಿ ಸರ್ಕಾರಿ ಶಾಲೆಯಲ್ಲಿ ಪ್ರದೀಪ್ ಶ್ರೀವಾಸ್ತವ ಪ್ರಾಂಶುಪಾಲರಾಗಿದ್ದರು. ಇವರು ಉಪೇಂದ್ರ ಕೌಶಿಕ್ನ ಗೆಳತಿಗೆ ಕಿರುಕುಳ ನೀಡುತ್ತಿದ್ದರಂತೆ. ಶಿಕ್ಷಕನಾಗಿ ಇಂತಹ ಕೃತ್ಯ ಎಸಗಿದ ಕಾರಣಕ್ಕಾಗಿ ಕೊಲೆ ಮಾಡಿರುವುದಾಗಿ ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ.
ತಡರಾತ್ರಿ ಪ್ರದೀಪ್ ಶ್ರೀವಾಸ್ತವ ತಮ್ಮ ಮನೆಗೆ ನಡೆದುಕೊಂಡು ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಆರೋಪಿ ಹಿಂಬಾಲಿಸಿ ಅವರ ಮನೆಗೆ ತಲುಪಿದ್ದಾನೆ. ಮನೆಯ ಬಾಗಿಲು ತೆರೆದು ಒಳಹೋಗುತ್ತಿದ್ದಂತೆ ಯುವಕ ನುಗ್ಗಿ ಬಂದು ಗಲಾಟೆ ಶುರು ಮಾಡಿದ್ದಾನೆ. ಬಳಿಕ ಬ್ಲೇಡ್‌ನಿಂದ ಇರಿದು, ಸುತ್ತಿಗೆಯಿಂದ ತಲೆಗೆ ಹೊಡೆದಿದ್ದಾನೆ. ಪರಿಣಾಮ ಪ್ರಾಂಶುಪಾಲ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಹೆಚ್ಚುವರಿ ಎಸ್ಪಿ ರಾಜೇಂದ್ರ ಜೈಸ್ವಾಲ್ ತಿಳಿಸಿದ್ದಾರೆ.
ಕೊಲೆ ಎಸಗಿದ ಬಳಿಕ ಆರೋಪಿ ಪರಾರಿಯಾಗಿದ್ದ. ಆದರೆ, ಮಾಹಿತಿ ತಿಳಿದು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ ಪೊಲೀಸರು ಶೋಧ ಕಾರ್ಯ ನಡೆಸಿ ತಡರಾತ್ರಿಯೇ ಆರೋಪಿಯನ್ನು ಬಂಧಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಸ್ನೇಹಿತನ ಹೆಸರಿನಲ್ಲಿತ್ತು 4 ಕೋಟಿ ರೂ ವಿಮೆ: ಅಪಘಾತದಂತೆ ಬಿಂಬಿಸಿ ಕೊಲೆ