ಲಖನೌ:ಉತ್ತರಪ್ರದೇಶ ವಿಧಾನಸಭಾ ಚುನಾವಣೆಗೆ ಈಗಾಗಲೇ ಎಲ್ಲ ಪಕ್ಷಗಳು ತಯಾರಿ ನಡೆಸುತ್ತಿವೆ. ಈ ಸಂದರ್ಭದಲ್ಲಿ ಆಡಳಿತಾರೂಢ ಸಿಎಂ ಯೋಗಿ ಆದಿತ್ಯನಾಥ್ ಹಾಗೂ ಡಿಸಿಎಂ ಕೇಶವ್ ಮೌರ್ಯ ನಡುವೆ ಭಿನ್ನಾಭಿಪ್ರಾಯಗಳು ಮುಂದುವರೆದಿವೆ.
ಕಳೆದ ವಾರವಷ್ಟೇ ದೆಹಲಿಗೆ ಹೋಗಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಹಿಂದಿರುಗಿದ್ದ ಯೋಗಿ, ಇಂದು ಡಿಸಿಎಂ ಮನೆಗೆ ಭೇಟಿ ನೀಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಇಂದು ಮಧ್ಯಾಹ್ನ ಸಿಎಂ ಯೋಗಿ ಆದಿತ್ಯನಾಥ್, ಕ್ಷೇತ್ರ ಪ್ರಚಾರಕ ಅನಿಲ್ ಸಿಂಗ್ ಸೇರಿ ಹಲವರು ಡಿಸಿಎಂ ಕೇಶವ್ ಮೌರ್ಯ ಮನೆಗೆ ಭೇಟಿ ನೀಡಿದ್ದರು. ಎಲ್ಲರೂ ಕೇಶವ್ ನಿವಾಸದಲ್ಲಿಯೇ ಊಟ ಮಾಡಿ, ಅವರ ಸೊಸೆ, ಮಗನಿಗೆ ಆಶೀರ್ವದಿಸಿದರು.
ಲಾಕ್ಡೌನ್ ಸಮಯದಲ್ಲಿ ಕೇಶವ್ ಮೌರ್ಯ ಪುತ್ರನ ಮದುವೆಯಾಗಿತ್ತು. ಕೋವಿಡ್ ನಿಯಮಾವಳಿ ಪ್ರಕಾರ ವಿವಾಹ ಕಾರ್ಯಕ್ರಮ ನಡೆದಿದ್ದರಿಂದ ಗಣ್ಯರು ಯಾರೂ ಹಾಜರಾಗಿರಲಿಲ್ಲ.
ಸೋಮವಾರ ರಾತ್ರಿಯೇ ನಡೆದಿತ್ತು ಸಭೆ..!
ಸೋಮವಾರ ರಾತ್ರಿಯೇ ಸಿಎಂ ಯೋಗಿ ನಿವಾಸದಲ್ಲಿ ಬಿಜೆಪಿ ನಾಯಕರ ಪ್ರಮುಖ ಸಭೆ ನಡೆದಿತ್ತು. ಇದರಲ್ಲಿ ಯೋಗಿ ಆದಿತ್ಯನಾಥ್, ಡಿಸಿಎಂ ಕೇಶವ್ ಮೌರ್ಯ, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್, ರಾಜ್ಯ ಉಸ್ತುವಾರಿ ರಾಧಾ ಮೋಹನ್ ಸಿಂಗ್ ಭಾಗಿಯಾಗಿದ್ರು.
ಈ ಸಮಯದಲ್ಲಿ ಸಿಎಂ ಹಾಗೂ ಡಿಸಿಎಂ ನಡುವಿನ ಮುನಿಸು ಮತ್ತೆ ಮುನ್ನೆಲೆಗೆ ಬಂದಿದೆ. ಪಕ್ಷ ಮತ್ತು ಸರ್ಕಾರ ತಮ್ಮನ್ನು ಯಾವ ರೀತಿ ನಿರ್ಲಕ್ಷ್ಯಿಸುತ್ತಿದೆ ಅನ್ನೋದನ್ನು ಮೌರ್ಯ, ಕೇಂದ್ರ ನಾಯಕರ ಮುಂದೆ ಸವಿವರವಾಗಿ ಬಿಚ್ಚಿಟ್ಟಿದ್ದಾರೆ ಎನ್ನಲಾಗಿದೆ.
ಯೋಗಿ - ಮೌರ್ಯ ಸಂಘರ್ಷ
2017 ರಲ್ಲಿ ಯುಪಿಯಲ್ಲಿ ಬಿಜೆಪಿ ಸರ್ಕಾರ ರಚನೆಯಾದಾಗಿನಿಂದ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯರ ನಡುವೆ ಎಲ್ಲವೂ ಸರಿಯಾಗಿಲ್ಲ. ಇವರಿಬ್ಬರ ನಡುವಿನ ಸಂಘರ್ಷ ಹಲವು ಬಾರಿ ಮುನ್ನೆಲೆಗೆ ಬಂದಿದೆ.
‘ಒಬಿಸಿ’ ಪ್ರತಿನಿಧಿ ಕೇಶವ್
ಕೇಶವ್, ಹಿಂದುಳಿದ ವರ್ಗಗಳ (ಒಬಿಸಿ) ಪ್ರತಿನಿಧಿಯಾಗಿದ್ದು, ಶೇಕಡಾ 17 ರಷ್ಟು ಮತ ಬ್ಯಾಂಕ್ ಹೊಂದಿದ್ದಾರೆ. ಯಾವುದೇ ಸಂದರ್ಭದಲ್ಲೂ ಬಿಜೆಪಿ ಅವರನ್ನು ಕಳೆದುಕೊಳ್ಳಲು ಇಷ್ಟ ಪಡುವುದಿಲ್ಲ. ಇತ್ತ ಯೋಗಿಯ ಹಿಂದುತ್ವವೂ ರಾಜ್ಯದಲ್ಲಿ ವ್ಯಾಪಕ ಪರಿಣಾಮ ಬೀರಿದೆ. ಇಂಥ ಪರಿಸ್ಥಿತಿಯಲ್ಲಿ ಹೈಕಮಾಂಡ್ ಇಬ್ಬರಿಗೂ ಬೇಸರ ಪಡಿಸದೇ ಮಧ್ಯಮ ಮಾರ್ಗ ಕಂಡುಕೊಳ್ಳಲು ಮುಂದಾಗಿದೆ.
ಈ ಹಿಂದಿನ ವಿಧಾನಸಭಾ ಚುನಾವಣೆಯು ಕೇಶವ್ ಮೌರ್ಯ ಅಧ್ಯಕ್ಷತೆಯಲ್ಲಿ ನಡೆದಿದ್ದು, ಬಿಜೆಪಿ ಭರ್ಜರಿ ಜಯ ಸಾಧಿಸಿತ್ತು. ನಂತರ ಕೇಶವ್ ಸಿಎಂ ಆಗುತ್ತಾರೆ ಎಂದು ಅನೇಕರು ನಂಬಿದ್ದರು. ಆದರೆ, ಹೈಕಮಾಂಡ್ ಯೋಗಿಗೆ ಮಣೆ ಹಾಕಿತು. ಕೇಶವ್ ಡಿಸಿಎಂ ಹುದ್ದೆಗೆ ತೃಪ್ತಿಪಡಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು.