ನವದೆಹಲಿ: ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್‌ನನ್ನು ಸುಪ್ರೀಂ ಕೋರ್ಟ್‌ನಲ್ಲಿ ಖುದ್ದು ಹಾಜರುಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಿಹಾರ್ ಜೈಲಿನ ನಾಲ್ವರ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಮಲಿಕ್‌ನನ್ನು ದೈಹಿಕ ಅಥವಾ ಖುದ್ದಾಗಿ ಹಾಜರು ಪಡಿಸಲು ನಿಷೇಧವಿದ್ದರೂ ಸಹ ಆತನನ್ನು ಜೈಲಿನ ವ್ಯಾನ್‌ನಲ್ಲಿ ಶುಕ್ರವಾರ ನ್ಯಾಯಾಲಯದ ಆವರಣಕ್ಕೆ ಕರೆತರುವ ಮೂಲಕ ಈ ಆದೇಶವನ್ನು ಉಲ್ಲಂಘಿಸಲಾಗಿತ್ತು.
ಭಯೋತ್ಪಾದನೆಗೆ ಹಣಕಾಸು ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಯಾಸಿನ್ ಮಲಿಕ್‌ನನ್ನು ಖುದ್ದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಸಾಕಷ್ಟು ವಿವಾದವನ್ನು ಸೃಷ್ಟಿಸಿತ್ತು. ಮಲಿಕ್‌ನನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸುವಂತೆ ಸೂಚನೆ ಇದ್ದರೂ ಆತನನ್ನು ನ್ಯಾಯಾಲಯಕ್ಕೆ ಖುದ್ದು ಹಾಜರುಪಡಿಸಲಾಗಿದ್ದು, ಇದು ಅಧಿಕಾರಿಗಳ ಕಡೆಯಿಂದ ನಡೆದ ಗಂಭೀರ ಭದ್ರತಾ ಲೋಪ ಎಂದು ಜೈಲು ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದೇ ಘಟನೆಗೆ ಸಂಬಂಧಿಸಿದಂತೆ ಇದೀಗ ತಿಹಾರ್ ಜೈಲಿನ ಉಪ ಅಧೀಕ್ಷಕರು, ಇಬ್ಬರು ಸಹಾಯಕ ಅಧೀಕ್ಷಕರು ಮತ್ತು ಒಬ್ಬ ಮುಖ್ಯ ವಾರ್ಡನ್ ಸೇರಿದಂತೆ ನಾಲ್ವರು ಅಧಿಕಾರಿಗಳನ್ನು ದೆಹಲಿ ಕಾರಾಗೃಹಗಳ ಪ್ರಾಧಿಕಾರವು ಅಮಾನತುಗೊಳಿಸಿದೆ. ಇದರೊಂದಿಗೆ ಮಹಾನಿರ್ದೇಶಕರು (ಜೈಲುಗಳು) ಸಂಜಯ್ ಬನಿವಾಲ್ ಅವರು ಈ ಬಗ್ಗೆ ತನಿಖೆಗೂ ಆದೇಶಿಸಿದ್ದಾರೆ. ಉಪ ಮಹಾನಿರೀಕ್ಷಕ (ಜೈಲುಗಳ ಪ್ರಧಾನ ಕಚೇರಿ) ರಾಜೀವ್ ಸಿಂಗ್ ಅವರು ವಿಚಾರಣೆ ನಡೆಸಿ ಮೂರು ದಿನಗಳೊಳಗೆ ತಮ್ಮ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.
ಇದನ್ನೂ ಓದಿ: ದೆಹಲಿಯ ತಿಹಾರ್ ಜೈಲಿನ ಮಾಜಿ ಡಿಜಿ ಸಂದೀಪ್ ಗೋಯಲ್ ಅಮಾನತು
ಮಲಿಕ್‌ನನ್ನು ಜೈಲಿನ ವ್ಯಾನ್‌ನಲ್ಲಿ ಶಸ್ತ್ರಸಜ್ಜಿತ ಸಿಬ್ಬಂದಿ ಬೆಂಗಾವಲಾಗಿ ನ್ಯಾಯಾಲಯದ ಆವರಣಕ್ಕೆ ಕರೆದುಕೊಂಡು ಬಂದಿದ್ದರು. ಈ ವಿಚಾರಣೆ ಪ್ರಾರಂಭವಾದ ನಂತರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ದೀಪಂಕರ್ ದತ್ತಾ ಅವರ ಪೀಠಕ್ಕೆ ಹೆಚ್ಚಿನ ಅಪಾಯದ ಅಪರಾಧಿಗಳು ತಮ್ಮ ಪ್ರಕರಣವನ್ನು ವಾದಿಸಲು ಅನುಮತಿಸಲಾಗುವುದಿಲ್ಲ. ಕೆಲ ಕಾರ್ಯವಿಧಾನ ಅನುಸರಿಸಬೇಕು ಎಂದು ತಿಳಿಸಿದ್ದರು.
ಆಗ ಮಲಿಕ್‌ನನ್ನು ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗಲು ಅನುವು ಮಾಡಿಕೊಡಲು ಸುಪ್ರೀಂಕೋರ್ಟ್ ಯಾವುದೇ ಅನುಮತಿ ಅಥವಾ ಆದೇಶವನ್ನು ನೀಡಿಲ್ಲ ಎಂದು ಪೀಠವು ಸ್ಪಷ್ಟ ಪಡಿಸಿತ್ತು. ಮಲಿಕ್ ಇತರ ಸಾಮಾನ್ಯ ಅಪರಾಧಿಗಳಂತಿಲ್ಲದ ಕಾರಣ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಕಾರ್ಯದರ್ಶಿಗಳಿಗೆ ತುಷಾರ್ ಮೆಹ್ತಾ ಒತ್ತಾಯಿಸಿದ್ದರು.
1990ರಲ್ಲಿ ಶ್ರೀನಗರದಲ್ಲಿ ನಾಲ್ವರು ಐಎಎಫ್ ಯೋಧರ ಹತ್ಯೆ ಮತ್ತು 1989ರಲ್ಲಿ ಆಗಿನ ಕೇಂದ್ರ ಸಚಿವ ಮುಫ್ತಿ ಮೊಹಮ್ಮದ್ ಸಯೀದ್ ಅವರ ಪುತ್ರಿ ರುಬಯ್ಯ ಅವರ ಅಪಹರಣ ಪ್ರಕರಣವನ್ನು ಯಾಸಿನ್ ಮಲಿಕ್ ಎದುರಿಸುತ್ತಿದ್ದಾನೆ. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ 2022ರ ಸೆಪ್ಟೆಂಬರ್‌ನಲ್ಲಿ ಟಾಡಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸಿಬಿಐ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ವೇಳೆ ಮಲಿಕ್ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು.