ಭಾರತ್ಪುರ(ರಾಜಸ್ಥಾನ): ಹಾಡಹಗಲೇ ಆರರಿಂದ ಏಳು ಮಂದಿ ಅಪರಿಚಿತ ದಷ್ಕರ್ಮಿಗಳ ಗುಂಪೊಂದು ಭರತ್ಪುರ ನಗರದ ಕಾಲಿ ಬಿಗಿಚಿ ಪ್ರದೇಶದಲ್ಲಿ 40 ವರ್ಷದ ಕುಸ್ತಿಪಟು ಗಜೇಂದ್ರ ಅಲಿಯಾಸ್ ಲಾಲಾ ಎಂಬವರ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಕುಸ್ತಿಪಟು ಗಜೇಂದ್ರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ತಾಲೀಮು ಮುಗಿಸಿ ಜಿಮ್‌ನಿಂದ ಹೊರಬರುತ್ತಿದ್ದ ವೇಳೆ ಈ ಆಘಾತಕಾರಿ ಘಟನೆ ನಡೆದಿದೆ.
ಸ್ಥಳದಲ್ಲಿದ್ದವರು ಗುಂಡಿನ ದಾಳಿಯ ವಿಡಿಯೋವನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ. ವಿಡಿಯೋದಲ್ಲಿ, ಬೆತ್ತವನ್ನು ಹಿಡಿದ ವ್ಯಕ್ತಿಯೊಬ್ಬ ಗಾಯಾಳುವಿನ ತೊಡೆಯ ಮೇಲೆ ಹೊಡೆಯುತ್ತಿರುವುದು ಕಂಡುಬಂದಿದೆ. ಸಂತ್ರಸ್ತರಿಗೆ ಐದು ಗುಂಡೇಟಿನ ಗಾಯಗಳಾಗಿವೆ.
ಇದನ್ನು ಓದಿ: ಟ್ರ್ಯಾಕ್ಟರ್ಗೆ ಮಿನಿ ಬಸ್ ಡಿಕ್ಕಿ: 3 ತಿಂಗಳ ಮಗು ಸೇರಿದಂತೆ 5 ಜನರ ಸಾವು
'ಕಾರಿನಲ್ಲಿ ಕನಿಷ್ಠ ಆರರಿಂದ ಏಳು ಜನರು ಸ್ಥಳಕ್ಕೆ ಬಂದಿದ್ದು, ತಾಲೀಮು ಮುಗಿಸಿ ಜಿಮ್‌ನಿಂದ ಹೊರಗೆ ಬರುತ್ತಿದ್ದ ಗಜೇಂದ್ರ ಅವರ ಮೇಲೆ ಗುಂಡು ಹಾರಿಸಿದ್ದಾರೆ' ಎಂದು ನಗರ ವೃತ್ತ ಅಧಿಕಾರಿ ಸತೀಶ್ ವರ್ಮಾ ತಿಳಿಸಿದ್ದಾರೆ. 'ಗಜೇಂದ್ರ ಅಲಿಯಾಸ್ ಲಾಲಾ (40) ಅನಾಹ ಗ್ರಾಮದ ನಿವಾಸಿಯಾಗಿದ್ದು, ನಗರದ ಕಾಲಿ ಬಗಿಚಿ ಪ್ರದೇಶದಲ್ಲಿರುವ ಜಿಮ್‌ನಿಂದ ಹೊರಗೆ ಬರುತ್ತಿದ್ದರು. ಆರರಿಂದ ಏಳು ಜನರ ತಂಡವು ಸ್ಥಳಕ್ಕೆ ಆಗಮಿಸಿ ಅವರ ಮೇಲೆ ಗುಂಡು ಹಾರಿಸಿದೆ. ಗಜೇಂದ್ರ ಅವರ ಕೈಗಳಿಗೆ ಮತ್ತು ದೇಹದ ಮೇಲೆ ಐದು ಗುಂಡುಗಳು ತಗುಲಿವೆ. ಅವರನ್ನು ಆರ್‌ಬಿಎಂ ಆಸ್ಪತ್ರೆಗೆ ದಾಖಲಿಸಲಾಗಿದೆ' ಎಂದು ವರ್ಮಾ ಹೇಳಿದ್ದಾರೆ.
ಇದನ್ನು ಓದಿ: ಬಹುಕೋಟಿ ವಂಚಕ ಸುಕೇಶ್ ಜೈಲಿನ ಕೊಠಡಿಯಲ್ಲಿ ಐಷಾರಾಮಿ ವಸ್ತುಗಳು ಪತ್ತೆ
ಗಜೇಂದ್ರ ಅವರ ಮೇಲೆ ಅಪರಿಚಿತ ದುಷ್ಕರ್ಮಿಗಳು ಗುಂಡಿನ ದಾಳಿ ಮಾಡಿರುವ ದೃಶ್ಯ ಹತ್ತಿರದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಿಸಿಟಿವಿ ದೃಶ್ಯಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಅವುಗಳ ಮೂಲಕ ದಾಳಿಕೋರರ ಗುರುತು ಪತ್ತೆ ಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಆರೋಪಿಗಳನ್ನು ಪತ್ತೆ ಹಚ್ಚಿ ಬಂಧನ ಮಾಡಲು ಈಗಾಗಲೇ ಪೊಲೀಸರು ತೀವ್ರ ಕಾರ್ಯಾಚರಣೆ ಕೈಗೊಂಡಿದ್ದಾರೆ. ಈ ಬಗ್ಗೆ ಅಲ್ಲಿನ ಪೊಲೀಸರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ವಿಡಿಯೋದಲ್ಲಿ, ಗಜೇಂದ್ರ ಅಲಿಯಾಸ್ ಲಾಲಾ ಜಿಮ್‌ನ ಹೊರಗೆ ನೆಲದ ಮೇಲೆ ಮಲಗಿದ್ದು, ಮೂವರು ವ್ಯಕ್ತಿಗಳು ಆತನ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ದಾಳಿಕೋರರಲ್ಲಿ ಒಬ್ಬರು ಗಜೇಂದ್ರ ಅವರಿಗೆ ದೊಣ್ಣೆಯಿಂದ ಹೊಡೆಯುತ್ತಿದ್ದರೆ, ಮತ್ತೊಬ್ಬ ದಾಳಿಕೋರ ಆತನ ಮೇಲೆ ಗುಂಡು ಹಾರಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಇಬ್ಬರು ಕುಸ್ತಿಪಟುವಿನ ಮೇಲೆ ಹಲ್ಲೆ ನಡೆಸುತ್ತಿದ್ದರೆ, ಮೂರನೇ ವ್ಯಕ್ತಿ ಬಂದೂಕು ಹಿಡಿದ ಉಗ್ರನ ರೀತಿಯಲ್ಲಿ ನಿಂತಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಎಲ್ಲ ದಿಕ್ಕಿನಿಂದ ತನಿಖೆ ನಡೆಸುತ್ತಿದ್ದಾರೆ. ಸಂಪೂರ್ಣ ತನಿಖೆ ಬಳಿಕ ಘಟನೆ ಬಗ್ಗೆ ಹಾಗೂ ಹಲ್ಲೆಗೆ ಕಾರಣ ಏನು ಎಂಬುದು ತಿಳಿದು ಬರಲಿದೆ.
ಇದನ್ನೂ ಓದಿ: ಮಿಸ್ಸಿಸ್ಸಿಪ್ಪಿ ಶೂಟೌಟ್: 6 ಮಂದಿ ಬಲಿ, ಶಂಕಿತ ಪೊಲೀಸ್ ವಶಕ್ಕೆ