ನವದೆಹಲಿ: ಶಹ್ದಾರ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ದೆಹಲಿ ಪೊಲೀಸರ ನಿರ್ಲಕ್ಷ್ಯದ ವಿರುದ್ಧ ಆರು ಪ್ರಗತಿಶೀಲ ಮಹಿಳಾ ಸಂಘಟನೆಗಳು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿವೆ.
ಪ್ರಕರಣ ಹಿನ್ನೆಲೆ: ಜನವರಿ 26 ರಂದು, ವಿವೇಕ್ ವಿಹಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಶಹ್ದಾರ ಪ್ರದೇಶದಲ್ಲಿ ಯುವತಿಯೊಬ್ಬಳನ್ನು ಅಪಹರಿಸಿ, ಆಕೆಯ ಮೇಲೆ ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಅಷ್ಟೇ ಅಲ್ಲದೇ ಆಕೆಯ ಮೇಲೆ ಹಲ್ಲೆ ಮಾಡಿ, ಕೂದಲು ಕತ್ತರಿಸಿ ಬೀದಿಗಳಲ್ಲಿ ಮೆರವಣಿಗೆ ಮಾಡಿದ್ದರು. ಕೃತ್ಯದ ವಿಡಿಯೋವನ್ನು ಕೂಡ ಚಿತ್ರೀಕರಿಸಿದ್ದರು.
ಘಟನೆ ಸಂಬಂಧ 14 ವರ್ಷದ ಅಪ್ತಾಪ್ತ ಸೇರಿದಂತೆ 11 ಮಂದಿ ಆರೋಪಿಗಳನ್ನು ಬಂಧಿಸಿದ್ದರು. ಬಂಧಿತರೆಲ್ಲರೂ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಸಂತ್ರಸ್ತ ಯುವತಿಯ ಹಿಂದೆ ತಿರುಗುತ್ತಿದ್ದ ಆರೋಪಿಗಳ ಕುಟುಂಬದ ಯುವಕನೊಬ್ಬ ಕಳೆದ ವರ್ಷ ಆತ್ಮಹತ್ಯೆ ಮಾಡಿಕೊಂಡಿದ್ದನು. ಈತನ ಸಾವಿಗೆ ಯುವತಿಯೇ ಕಾರಣ ಎಂದು ದುರುಳರು ಕೃತ್ಯ ಎಸಗಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ನಾಲ್ಕು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಪಾಪಿ ಸೋದರ ಮಾವ
ಘಟನೆ ನಡೆಯುವ ಮುನ್ನವೇ ಸಂತ್ರಸ್ತೆಯ ಸಹೋದರಿ ನಮ್ಮ ಕುಟುಂಬಕ್ಕೆ ಬೆದರಿಕೆ ಇದೆ ಎಂದು ದೂರು ನೀಡಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಅಲ್ಲದೇ ಘಟನೆ ನಡೆದ ವೇಳೆ ಸ್ಥಳಕ್ಕೆ ಬಂದಿದ್ದ ಪೊಲೀಸರು ತಕ್ಷಣವೇ ಆರೋಪಿಗಳನ್ನು ಬಂಧಿಸಿರಲಿಲ್ಲ. ಬಳಿಕವೂ ನಿಧಾನ ಧೋರಣೆ ಅನುಸರಿಸಿದ್ದಾರೆ ಎಂದು ವಕೀಲೆ ಮತ್ತು ಮಹಿಳಾ ಸಂಘಟನೆಯ ಮುಖಂಡೆ ಪೂನಂ ಕೌಶಿಕ್ ನೇತೃತ್ವದಲ್ಲಿ ಗೃಹ ಸಚಿವರಿಗೆ ಬರೆದ ಪತ್ರದಲ್ಲಿ ಆರೋಪಿಸಲಾಗಿದೆ.
ಪ್ರಕರಣದಲ್ಲಿ ಗೃಹ ಸಚಿವರು ಮಧ್ಯಪ್ರವೇಶಿಸಿದ ಆರೋಪಿಗಳಿಂದ ಹಿಡಿದು ಪೊಲೀಸರವರೆಗೆ ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪತ್ರದಲ್ಲಿ ಒತ್ತಾಯಿಸಲಾಗಿದೆ.