ನರಸಪುರಂ (ಆಂಧ್ರ ಪ್ರದೇಶ): ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ನರಸಾಪುರದಲ್ಲಿ ಸೋಮವಾರ ಮುಖ್ಯಮಂತ್ರಿ ವೈ ಎಸ್ ಜಗನ್ಮೋಹನ್ ರೆಡ್ಡಿ ಅವರ ಸಭೆಯಲ್ಲಿ ಕಪ್ಪು ಚುನ್ನಿ (ಸ್ಕಾರ್ಫ್) ಮತ್ತು ಕಪ್ಪು ಮಾಸ್ಕ್ ಧರಿಸಿ ಬಂಧವರಿಗೆ ನಿರ್ಬಂಧ ಹೇರಲಾಗಿತ್ತು. ಕೆಲ ಮಹಿಳೆಯರನ್ನು ಪೊಲೀಸರು ಬಲವಂತವಾಗಿ ತಡೆದು ಅವಮಾನಿಸಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.
ಪ್ರವೇಶ ದ್ವಾರದ ಬಳಿಯ ಬ್ಯಾರಿಕೇಡ್‌ಗಳ ಬಳಿ ಪೊಲೀಸರಿಗೆ ಚುನ್ನಿಗಳನ್ನು ಒಪ್ಪಿಸಿದ ನಂತರವೇ ಮಹಿಳೆಯರಿಗೆ ಸಭೆಗೆ ಪ್ರವೇಶಿಸಲು ಅನುಮತಿಸಲಾಯಿತು. ಕಪ್ಪು ಛತ್ರಿ ತಂದಿದ್ದ ಕೆಲವರನ್ನೂ ಒಪ್ಪಿಸುವಂತೆ ಕೇಳಿದ್ದಾರೆ. ಈ ವೇಳೆ ಕೆಲವು ಮಹಿಳೆಯರು ಮನೆಗಳಿಗೆ ಮರಳಿದ್ದಾರೆ. ಹೀಗಾಗಿ, ಪೊಲೀಸರ ವರ್ತನೆಗೆ ಆಕ್ಷೇಪ ವ್ಯಕ್ತವಾಗಿದೆ.
ಘಟನೆಗೆ ಸಂಬಂಧಿಸಿದಂತೆ ಟಿಡಿಪಿ ನಾಯಕಿ ಹಾಗೂ ಮಾಜಿ ಶಾಸಕಿ ಅನಿತಾ ವಂಗಲಪುಡಿ ಟ್ವೀಟ್ ಮಾಡಿ, 'ಆಂಧ್ರಪ್ರದೇಶದಲ್ಲಿ ಮುಖ್ಯಮಂತ್ರಿಗಳ ಸಭೆಗೆ ಹಾಜರಾಗಲು ಮಹಿಳೆಯರು ಮತ್ತು ಹುಡುಗಿಯರು ತಮ್ಮ ಚುನ್ನಿಗಳನ್ನು (ತಲೆ ಮತ್ತು ಭುಜದ ಸುತ್ತ ಧರಿಸಿರುವ ಸ್ಕಾರ್ಫ್) ತೆಗೆಯುವಂತೆ ಒತ್ತಾಯಿಸಲಾಗಿದೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಜೊತೆಗೆ ಮಹಿಳೆಯರ ವಿನಯಶೀಲತೆಗೆ ಅವಮಾನವಾಗಿದೆ' ಎಂದಿದ್ದಾರೆ.
'ಯಾರಾದರೂ ತನ್ನ ಸಭೆಗಳಲ್ಲಿ ಕಪ್ಪು ಬಾವುಟಗಳೊಂದಿಗೆ ಪ್ರತಿಭಟಿಸಬಹುದೆಂಬ ಭಯದಿಂದ, ಮುಖ್ಯಮಂತ್ರಿಗಳು ಉದ್ದೇಶಪೂರ್ವಕವಾಗಿ ಪೊಲೀಸರನ್ನು ಹಾಗೆ ಮಾಡಲು ಪ್ರೋತ್ಸಾಹಿಸುತ್ತಿದ್ದಾರೆ ಎಂದು ನಾವು ಬಲವಾಗಿ ನಂಬುತ್ತೇವೆ. ಅವರು ತಮ್ಮ ಚುನ್ನಿಗಳನ್ನು ಆವರಣದ ಹೊರಗೆ ಬಿಟ್ಟು ಒಳಗೆ ಹೋಗಲು ಮಹಿಳೆಯರನ್ನು ಒತ್ತಾಯಿಸುತ್ತಿದ್ದಾರೆ' ಎಂದು ಅವರು ಟ್ವೀಟ್ ಮಾಡಿದ್ದಾರೆ.
ವಿಶೇಷವೆಂದರೆ ನರಸಾಪುರ ಹಾಗೂ ಸುತ್ತಮುತ್ತಲಿನ ನಿವಾಸಿಗಳು ಸಿಎಂ ಸಭೆಗೆ ಆಗಮಿಸಿ ಯಶಸ್ವಿಗೊಳಿಸುವಂತೆ ಸೂಚನೆ ನೀಡಿದ್ದಾರೆ. ಸಭೆಯಲ್ಲಿ ಜನಸಂದಣಿಯನ್ನು ನಿಯಂತ್ರಿಸಲು ಆಯಾ ಇಲಾಖೆಗಳ ನೌಕರರು ಮತ್ತು ಸಿಬ್ಬಂದಿಗೆ ಗುರಿಯನ್ನು ನೀಡಲಾಯಿತು. ಸಭೆಗೆ ಜನರನ್ನು ಸಾಗಿಸಲು ಬಸ್ ವ್ಯವಸ್ಥೆ ಮಾಡಿ ಬಸ್ ತುಂಬಿದ ನಂತರವೇ ಕಳುಹಿಸಿದರು.
ಓದಿ: ಜನಪ್ರತಿನಿಧಿಗಳ ವಾಕ್, ಅಭಿವ್ಯಕ್ತಿ ಸ್ವಾತಂತ್ರ್ಯ ನಿರ್ಬಂಧ ವಿಚಾರ: ಆದೇಶ ಕಾಯ್ದಿರಿಸಿದ ಸುಪ್ರೀಂ ಕೋರ್ಟ್