ಶಿವಹರ್, ಬಿಹಾರ್: ನಮ್ಮ ದೇಶದಲ್ಲಿ ಮಹಿಳೆಯರನ್ನು ದೇವತೆಗಳೆಂದು ಪೂಜಿಸಲಾಗುತ್ತದೆ. ಆಕೆಯನ್ನು ಜಗತ್ತಿನ ತಾಯಿ ಶಕ್ತಿರೂಪ ಎಂದು ಕರೆಯುತ್ತಾರೆ. ಆದರೆ ಈಗಲೂ ಮಹಿಳೆಯರಿಗೆ ಹಿಂಸೆಯಾಗುತ್ತಿದೆ. ಇಂತಹದೊಂದು ಆಘಾತಕಾರಿ ಪ್ರಕರಣ ಬಿಹಾರದ ಜಿಲ್ಲೆಯೊಂದರಲ್ಲಿ ಬೆಳಕಿಗೆ ಬಂದಿದೆ.
ಶಿವಹರ್ನಲ್ಲಿ ಅರೆಬೆತ್ತಲೆ ಮಹಿಳೆಗೆ ಥಳಿತ: ಶಿವಹರ್ನ ಗ್ರಾಮ ಪಂಚಾಯಿತಿಯ ಸಮಯದಲ್ಲಿ ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ಮಹಿಳೆಯೊಬ್ಬಳ ಮೇಲೆ ಸುಳ್ಳು ಆರೋಪ ಮಾಡಿ ಅರೆಬೆತ್ತಲೆಯಾಗಿ ಥಳಿಸಿದ್ದು, ಮಾತ್ರವಲ್ಲದೇ ಆಕೆಯ ಒಡವೆಗಳನ್ನೆಲ್ಲ ದೋಚಲಾಗಿದೆ. ಅಷ್ಟೇ ಅಲ್ಲ ಮಹಿಳೆಯಿಂದ ಎರಡು ಸಾವಿರ ರೂಪಾಯಿ ನಗದನ್ನು ದೋಚಿ ನಂತರ ಆ ಮಹಿಳೆಯನ್ನು ಹೊರ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ
ರಾತ್ರೋರಾತ್ರಿ ಹಲಸಿನ ಮರಕ್ಕೆ ಕಟ್ಟಿ ಹಾಕಿ ಥಳಿತ: ದೂರಿನ ಪ್ರಕಾರ, ಮಹಿಳೆಗೆ ಪಂಚಾಯ್ತಿಯಲ್ಲಿ ಅವಮಾನವಾಗುವ ಒಂದು ದಿನದ ಮುನ್ನ ಗಂಡನ ಕುಟುಂಬಸ್ಥರು ಆ ಮಹಿಳೆಗೆ ಮನಬಂದಂತೆ ಥಳಿಸಿದ್ದಾರೆ. ಆಕೆಗೆ ಥಳಿಸಿದ ಬಳಿಕವೂ ತೃಪ್ತಿಯಾಗದ ಗಂಡನ ಕುಟುಂಬಸ್ಥರು ಮಹಿಳೆಯನ್ನು ಇಡೀ ರಾತ್ರಿ, ಮನೆ ಸಮೀಪದ ಹಲಸಿನ ಮರಕ್ಕೆ ಕಟ್ಟಿ ಹಾಕಿದ್ದಾರೆ. ಘಟನೆಯ ನಂತರ, ಸಂತ್ರಸ್ತ ಮಹಿಳೆ ಪೊಲೀಸ್ ಠಾಣೆಗೆ ತೆರಳಿ ಎಫ್‌ಐಆರ್ ದಾಖಲಿಸಿದ್ದಾರೆ ಮತ್ತು ತನ್ನ ಗಂಡನ ಕುಟುಂಬಸ್ಥರ ವಿರುದ್ಧ ಆರೋಪ ಮಾಡಿದ್ದಾರೆ.
ಗ್ರಾಮದ ಯುವಕನೊಂದಿಗೆ ಮಾತನಾಡಿದ್ದಕ್ಕೆ ಶಿಕ್ಷೆ: ತನ್ನ ಪತಿ ಕುಡಿತದ ಚಟ ಹೊಂದಿದ್ದು, ಜೂಜುಕೋರನೂ ಆಗಿದ್ದಾರೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ತೊಂದರೆಗೊಳಗಾದ ಮಹಿಳೆ, ತಮ್ಮ ತಾಯಿಯ ಮನೆಯಲ್ಲಿ ವಾಸಿಸುತ್ತಿದ್ದರು. ಜುಲೈ 27 ರಂದು ತನ್ನ ಅತ್ತೆಯ ಮನೆಗೆ ಬಂದಿದ್ದಾಗಿ ಮಹಿಳೆ ತಿಳಿಸಿದ್ದಾರೆ. ಈ ವೇಳೆ, ಗ್ರಾಮದ ಹುಡುಗನೊಬ್ಬನ ಜತೆ ಮಾತನಾಡಿದ್ದಾನೆ. ಇದರಿಂದಾಗಿ ಅವರು ಕೋಪಕ್ಕೆ ಒಳಗಾಗಿದ್ದರು. ನನ್ನ ಗಂಡನ ಕುಟುಂಬಸ್ಥರು ನನ್ನ ಮೇಲೆ ಸುಳ್ಳು ಆರೋಪ ಮಾಡಿ ಮನಬಂದಂತೆ ಥಳಿಸಿದ್ದಾರೆ. ಅಷ್ಟೇ ಅಲ್ಲ ಇಡೀ ರಾತ್ರಿ ಮರಕ್ಕೆ ಕಟ್ಟಿ ಹಾಕಲಾಗಿತ್ತು ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮಹಿಳೆಗೆ ಥಳಿಸಿ ನಂತರ ದರೋಡೆ...: ಜುಲೈ 27ರಂದು ಸಂತ್ರಸ್ತೆಯ ಮೇಲೆ ಹಲ್ಲೆ ನಡೆಸಿ, ಜುಲೈ 28ರಂದು ಗ್ರಾಮದಲ್ಲಿ ಪಂಚಾಯ್ತಿ ನಡೆಸಲಾಗಿತ್ತು. ಹಿರಿಯರ ಮುಂದೆ ಮಹಿಳೆಯನ್ನು ಅರೆಬೆತ್ತಲೆಯಾಗಿ ಥಳಿಸಲಾಗಿದೆ. ಕಿಕ್ಕಿರಿದು ತುಂಬಿದ್ದ ಪಂಚಾಯ್ತಿಯಲ್ಲಿ ಆಕೆಯ ಚಿನ್ನಾಭರಣ ದೋಚಿದ್ದಾರೆ. ಮಂಗಳಸೂತ್ರವನ್ನೂ ಸಹ ಬಿಟ್ಟಿರಲಿಲ್ಲ. ನಂತರ ಆಕೆಯನ್ನು ಥಳಿಸಿ ಅವಮಾನ ಮಾಡಿದ್ದಾರೆ.
7 ಜನರ ಮೇಲೆ ಎಫ್‌ಐಆರ್: ಗಾಯಗೊಂಡ ಸ್ಥಿತಿಯಲ್ಲಿ ಮಹಿಳೆ ಹೇಗೋ ಆಸ್ಪತ್ರೆಗೆ ತೆರಳಿದ್ದಾರೆ. ಅಲ್ಲಿಂದ ಚಿಕಿತ್ಸೆ ಪಡೆದು ಜುಲೈ 30 ರಂದು ಮಹಿಳಾ ಪೊಲೀಸ್ ಠಾಣೆಗೆ ಆಗಮಿಸಿ ಎಫ್‌ಐಆರ್ ದಾಖಲಿಸಿದ್ದಾರೆ. ಮಹಿಳಾ ಪೊಲೀಸ್ ಠಾಣೆಯ ಮುಖ್ಯಸ್ಥೆ ಕೋಮಲ್ ರಾಣಿ ಘಟನೆಯನ್ನು ಖಚಿತಪಡಿಸಿದ್ದಾರೆ. ಪೊಲೀಸರು ಸಂಪೂರ್ಣ ತನಿಖೆ ನಡೆಸುತ್ತಿದ್ದು, ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಪ್ರಕರಣದಲ್ಲಿ ಏಳು ಮಂದಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
"ಮಹಿಳೆ ಮೇಲಿನ ಹಲ್ಲೆ ಪ್ರಕರಣ ಬೆಳಕಿಗೆ ಬಂದಿದೆ. ಏಳು ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಈ ವಿಷಯದ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಅಲ್ಲದೆ, ಆರೋಪಿಗಳನ್ನು ಹಿಡಿಯಲು ದಾಳಿ ನಡೆಸಲಾಗುತ್ತಿದೆ" ಎಂದು ಮಹಿಳಾ ಪೊಲೀಸ್ ಅಧಿಕಾರಿ ಕೋಮಲ್ ರಾಣಿ ತಿಳಿಸಿದ್ದಾರೆ.
ಓದಿ: Smartphones & Children: ಮಕ್ಕಳ ಸ್ಮಾರ್ಟ್ಫೋನ್ ಬಳಕೆಗೆ ಕಡಿವಾಣ; ಚೀನಾ ಸರ್ಕಾರದ ಹೊಸ ನಿಯಮ