ಗೋರಖ್‌ಪುರ: ಜಿಲ್ಲೆಯ ಕ್ಯಾಂಟ್ ಪ್ರದೇಶದ ಜತೇಪುರ್ ಚೌಕಿಯ ಗೋಲ್‌ಘರ್‌ನ ಬಲದೇವ್ ಪ್ಲಾಜಾದಲ್ಲಿ ಜ್ಯುವೆಲ್ಲರಿ ಶಾಪ್ಗೆ ಗ್ರಾಹಕರ ಸೋಗಿನಲ್ಲಿ ಬಂದ ಹೈಪ್ರೊಫೈಲ್ ಮಹಿಳೆಯೊಬ್ಬಳು ನೆಕ್ಲೇಸ್ ಕದ್ದೊಯ್ದಿದ್ದಾಳೆ. ಕಳುವಾದ ನೆಕ್ಲೇಸ್ ಬೆಲೆ 10 ಲಕ್ಷ ರೂಪಾಯಿ ಎಂದು ತಿಳಿದುಬಂದಿದೆ.
ನವೆಂಬರ್ 17 ರಂದು ಬಲದೇವ್ ಪ್ಲಾಜಾದಲ್ಲಿರುವ ಬೆಚು ಲಾಲ್ ಸರಾಫ್ ಪ್ರೈವೇಟ್ ಲಿಮಿಟೆಡ್‌ನ ಅಂಗಡಿಯಲ್ಲಿ ಘಟನೆ ನಡೆದಿದೆ. ಈ ಬಗ್ಗೆ ದೂರು ಬಂದ ತಕ್ಷಣ ಪೊಲೀಸರು ತನಿಖೆ ಆರಂಭಿಸಿದ್ದರು. ನವೆಂಬರ್ 17ರಂದೇ ಕಳ್ಳತನ ನಡೆದಿದ್ದರೂ ಶೋರೂಂ ಮಾಲೀಕರು ದೂರು ನೀಡಿರಲಿಲ್ಲ. ಶೋ ರೂಂನಿಂದಲೇ ಕಳ್ಳತನವಾಗಿರುವ ವಿಡಿಯೋ ಬಳಿಕ ವೈರಲ್ ಆದ ನಂತರ ದೂರು ನೀಡಿದ್ದಾರೆ.
ಇದನ್ನೂ ಓದಿ: ಮೊಬೈಲ್ ಟವರ್ನ್ನೇ ಕದ್ದ ಖದೀಮರು.. ಕಂಪನಿ ಅಧಿಕಾರಿಗಳಂತೆ ಬಂದು ದುಷ್ಕೃತ್ಯ!
ಹಸಿರು ಸೀರೆಯುಟ್ಟು, ಕಪ್ಪು ಕನ್ನಡಕ ಹಾಕಿದ್ದ ಮಹಿಳೆಯ ಬೇಡಿಕೆಯ ಮೇರೆಗೆ ಜ್ಯುವೆಲ್ಲರಿ ಶಾಪ್ ಉದ್ಯೋಗಿಗಳು ನೆಕ್ಲೇಸ್ ಸೆಟ್ ತೋರಿಸಿದ್ದಾರೆ. ಹೀಗೆ ನೆಕ್ಲೇಸ್ಗಳನ್ನು ನೋಡುವ ಸೋಗಿನಲ್ಲಿ ಒಂದು ಬಾಕ್ಸ್ ಕದ್ದಿದ್ದಾಳೆ. ಸ್ವಲ್ಪ ಸಮಯದ ನಂತರ ಬೇರೆ ಆಭರಣಗಳನ್ನು ನೋಡಿದ ಮಹಿಳೆ, ಯಾವುದೂ ಇಷ್ಟವಾಗಿಲ್ಲ ಎಂದು ಹೇಳಿ ತೆರಳುತ್ತಾಳೆ. ಈ ಎಲ್ಲಾ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.