ಕೋಯಿಕ್ಕೋಡ್(ಕೇರಳ): ಸಾರಿಗೆ ಬಸ್ನಲ್ಲಿ ಸಂಚರಿಸುತ್ತಿದ್ದಾಗ ಸಹ ಪ್ರಯಾಣಿಕನೋರ್ವ ತನಗೆ ಕಿರುಕುಳ ನೀಡಿದ್ದಾನೆ ಎಂದು ಶಿಕ್ಷಕಿಯೊಬ್ಬರು ಆರೋಪಿಸಿ ಫೇಸ್ಬುಕ್ ಪೋಸ್ಟ್ ಹಾಕಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸಾರಿಗೆ ಸಚಿವರು, ಈ ಪ್ರಕರಣದ ಬಗ್ಗೆ ತನಿಖೆ ನಡೆಸಿ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ್ದಾರೆ.
ಕೋಯಿಕ್ಕೋಡ್‌ಗೆ ತೆರಳುತ್ತಿದ್ದ ಕೇರಳದ ಕೆಎಸ್ಆರ್ಟಿಸಿ ಬಸ್ನಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದೆ. ತಿರುವನಂತಪುರಂನಲ್ಲಿ ಶಿಕ್ಷಕಿ ಬಸ್ ಹತ್ತಿದ್ದರು. ಇವರ ಹಿಂದೆ ಆರೋಪಿಯು ಬಸ್ ಹತ್ತಿ ಹಿಂದಿನ ಸೀಟ್ನಲ್ಲಿ ಕುಳಿತಿದ್ದ ಎನ್ನಲಾಗಿದೆ.
ಬಸ್ ತ್ರಿಶೂರ್ ತಲುಪಿದಾಗ ಹಿಂದಿನ ಸೀಟ್ನಲ್ಲಿ ಕುಳಿತಿದ್ದ ಆರೋಪಿ ಕಿರುಕುಳ ನೀಡಲು ಶುರು ಮಾಡಿದ. ಈ ಬಗ್ಗೆ ಬಸ್ ಕಂಡಕ್ಟರ್ ಗಮನಕ್ಕೆ ತರಲಾಯಿತು. ಆದರೆ, ಇದನ್ನು ಕಂಡಕ್ಟರ್ ಅಷ್ಟೊಂದು ಗಂಭೀರವಾಗಿ ಪರಿಗಣಿಸಲಿಲ್ಲ ಎಂದು ಶಿಕ್ಷಕಿ ಆರೋಪಿಸಿ ಭಾನುವಾರ ಬೆಳಗ್ಗೆ ಫೇಸ್ಬುಕ್ನಲ್ಲಿ ವಿಡಿಯೋ ಹಾಕಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಮಗಳ ಮೇಲೆ ತಂದೆಯಿಂದಲೇ ಲೈಂಗಿಕ ಕಿರುಕುಳ.. ಎಚ್ಚೆತ್ತುಕೊಂಡ ಸರ್ಕಾರದಿಂದ ದಿಟ್ಟ ಹೆಜ್ಜೆ
ಅಲ್ಲದೇ, ಆರೋಪಿಯು ಕ್ಷಮೆ ಕೇಳಿದ. ಇದರಿಂದ ಇದನ್ನು ಅಲ್ಲಿಗೆ ಬಿಡಲಾಯಿತು ಎಂದೂ ಹೇಳಿಕೊಂಡಿದ್ದಾರೆ. ಇತ್ತ, ವಿಷಯ ತಿಳಿದ ಸಾರಿಗೆ ಸಚಿವ ಆಂಟನಿ ರಾಜು, ಬಸ್ನಲ್ಲಿ ಮಹಿಳೆಯೊಂದಿಗೆ ನಡೆದ ಘಟನೆ ಬಗ್ಗೆ ತನಿಖೆ ನಡೆಸಲಾಗುವುದು. ಆರೋಪಿ ವಿರುದ್ಧ ಕ್ರಮ ಜರುಗಿಸಲಾಗುವುದು. ಜತೆಗೆ ಈ ಘಟನೆಯಲ್ಲಿ ಕಂಡಕ್ಟರ್ ತಪ್ಪು ಅಥವಾ ಬೇಜವಾಬ್ದಾರಿ ಕಂಡು ಬಂದರೂ ಆತನ ವಿರುದ್ಧವೂ ಸೂಕ್ತ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.