ನಾಗ್ಪುರ(ಮಹಾರಾಷ್ಟ್ರ): 58 ವರ್ಷದ ಮಹಿಳೆ ತನ್ನ ಅಳಿಯನ ಕುಡಿತದ ಚಟ ಮತ್ತು ನಿಂದನೀಯ ವರ್ತನೆಯಿಂದ ಕೋಪಗೊಂಡು, ಆತನ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿ ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯಲ್ಲಿ ನಡೆದಿದೆ. ಕೊಂಧಲಿ ಪೊಲೀಸ್ ಠಾಣಾ ವ್ಯಾಪ್ತಿಯ ಬಜಾರ್‌ಗಾಂವ್ ಗ್ರಾಮದಲ್ಲಿ ಕಳೆದ ವಾರ ಈ ಘಟನೆ ನಡೆದಿದ್ದು, ಮಹಿಳೆಯನ್ನು ಕೊಲೆ ಆರೋಪದಡಿ ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ಮಾಹಿತಿ ನೀಡಿದ್ದಾರೆ.
ಮೃತನು 37 ವರ್ಷದವನಾಗಿದ್ದು, ಚಂದ್ರಾಪುರ ಜಿಲ್ಲೆಯಲ್ಲಿ ನೆಲೆಸಿದ್ದ. ಈತ ಅತಿಯಾತ ಕುಡಿತದ ಚಟ ಹೊಂದಿದ್ದರಿಂದ, ಈತನ ಅತ್ತೆ ತನ್ನ ಮಗಳ ಜೊತೆ ಹತ್ತಿರದ ಸ್ಥಳೀಯ ಬಜಾರ್‌ಗಾಂವ್‌ಗೆ ಮನೆ ಬದಲಾಯಿಸುವಂತೆ ಕೇಳಿಕೊಂಡಿದ್ದಾರೆ. ಹಾಗಾಗಿ ಮಗಳು ಅಳಿಯ ಬಜಾರ್‌ಗಾಂವ್‌ನಲ್ಲಿ ವಾಸಿಸಲು ಪ್ರಾರಂಭಿಸಿದ್ದರು. ಆದರೆ, ಅಳಿಯ ಇಲ್ಲಿಯೂ ತನ್ನ ಕುಡಿತವನ್ನು ನಿಲ್ಲಿಸದೇ ಗ್ರಾಮಸ್ಥರಿಂದ ಹಣವನ್ನು ಪಡೆದು ತನ್ನ ಹಳೇ ಚಾಳಿಯನ್ನು ಮುಂದುವರಿಸಿದ್ದ.
9ನೇ ಡಿಸೆಂಬರ್ 27ರಂದು ಮದ್ಯ ಸೇವಿಸಿದ ಬಳಿಕ ಈತ, ತನ್ನ ಪತ್ನಿ ಮತ್ತು ಅತ್ತೆಯನ್ನು ನಿಂದಿಸುತ್ತಿದ್ದನ್ನಲ್ಲದೇ ಅವರ ಮೇಲೆ ಹಲ್ಲೆ ನಡೆಸಿದ್ದ. ಇದರಿಂದ ಕೋಪಗೊಂಡ ಅತ್ತೆ ಡಿಸೆಂಬರ್ 27ರಂದು ಅಳಿಯನ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿದ್ದರು. ಅತ್ತೆಯ ಕಲ್ಲಿನೇಟು ತಿಂದಿದ್ದರಿಂದ ತೀವ್ರವಾಗಿ ಗಾಯಗೊಂಡಿದ್ದ ಅಲ್ಲದೇ, ತೀವ್ರ ರಕ್ತಸ್ರಾವವಾಗಿ ನೆಲದ ಮೇಲೆ ಕುಸಿದು ಬಿದ್ದು ಮೃತಪಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇದಾದ ಬಳಿಕ ಡಿಸೆಂಬರ್ 28 ರಂದು ಶವ ಪತ್ತೆಯಾಗಿದೆ. ನಂತರ ಕೊಲೆ ಪ್ರಕರಣವನ್ನು ದಾಖಲಿಸಿದ ಪೊಲೀಸರು ಸುಳಿವಿನ ಆಧಾರದ ಮೇಲೆ ಮಹಿಳೆಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಆಸ್ಪತ್ರೆಯ ಮೂರನೇ ಮಹಡಿಯಿಂದ 2 ತಿಂಗಳ ಮಗು ಎಸೆದು ಕೊಂದ ತಾಯಿ