ಭಿಂಡ್ (ಮಧ್ಯಪ್ರದೇಶ): ಮಹಿಳೆಯರ ಬಗ್ಗೆ ತಪ್ಪು ಅಭಿಪ್ರಾಯ ಬರುವಂತೆ ಹಾಕಲಾಗಿರುವ ರಕ್ತದಾನದ ಬ್ಯಾನರ್‌ಗಳು ಮಧ್ಯಪ್ರದೇಶದ ಭಿಂಡ್‌ನಲ್ಲಿ ವಿವಾದಕ್ಕೆ ಕಾರಣವಾಗಿವೆ. ಪಟ್ಟಣದ ರಸ್ತೆ ಬದಿ ಹಾಕಿರುವ ಬ್ಯಾನರ್ಗಳ ಮೇಲೆ ಬರೆಯಲಾಗಿರುವ ಘೋಷಣೆಗಳು ಈಗ ಜನರ ಕೆಂಗಣ್ಣಿಗೆ ಗುರಿಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೋಲ್ಗೆ ಒಳಗಾಗುತ್ತಿವೆ. ಇದು ಭಿಂಡ್ ಪುರಸಭೆಯನ್ನು ಮುಜುಗರಕ್ಕೊಳಗಾಗುವಂತೆ ಮಾಡಿದೆ.
ರಕ್ತದಾನದ ಬ್ಯಾನರ್‌ಗಳು ಹೀಗೆ ಟ್ರೋಲ್ಗೆ ಒಳಗಾಗುತ್ತಿರುವಂತೆ, ಭಿಂಡ್ ಪುರಸಭೆಯ ಅಧಿಕಾರಿಗಳು ಅಂತಹ ಆಕ್ಷೇಪಾರ್ಹ ಬ್ಯಾನರ್‌ಗಳನ್ನು ತೆಗೆದುಹಾಕಲು ಆದೇಶ ನೀಡಿದ್ದಾರೆ. "ಬಿವಿ ಇತ್ನಾ ಖೂನ್ ನಹೀ ಪೀಟೆ ಹೈ ಕಿ ಆಪ್ ರಕ್ತ ದಾನ್ ನಹೀ ಕರ್ ಸಕೇಂ" ಅಂದರೆ, ನಿಮ್ಮ ಹೆಂಡತಿ ತುಂಬಾ ರಕ್ತ ಹೀರಲು ಆಗುವುದಿಲ್ಲ ಮತ್ತು ಅದನ್ನು ನೀವು ದಾನ ಮಾಡಲೂ ಸಾಧ್ಯವಿಲ್ಲ ಎಂಬ ಅರ್ಥ ಬರುವ ರೀತಿಯಲ್ಲಿ ಬ್ಯಾನರ್ನಲ್ಲಿ ಹಾಕಲಾಗಿದೆ. ಮತ್ತೊಂದರಲ್ಲಿ "ಟ್ಯಾಬ್ ತಬ್ ಬೀವಿ ಸೇ ರಕ್ತದಾನ ಕರೇಂಗೆ ಜಬ್ ಜಬ್ ಬೀಬಿ ಕಾ ಪರಾ ಚಡ್ ಜಾಯೇ " ಹೆಂಡತಿ ಕೋಪಗೊಂಡಾಗ ಅವಳ ಬಳಿ ರಕ್ತದಾನ ಮಾಡುವಂತೆ ಕೇಳಿ‘‘ ಎಂಬ ಅರ್ಥದ ಘೋಷಣೆಗಳಿವೆ. ಇದು ಅಲ್ಲಿನ ಜನರನ್ನು ಕೆರಳಿಸಿದೆ. ಅಷ್ಟೇ ಇಲ್ಲ ಈ ಬ್ಯಾನರ್‌ಗಳು ಈಗ ರಾಜ್ಯದಲ್ಲಿ ಸೋಷಿಯಲ್ ಮೀಡಿಯಾಗಳಿಗೆ ಆಹಾರವಾಗಿವೆ.
ನಗರ ಮೂಲದ ಸಂಸ್ಥೆಯೊಂದು ಭಿಂಡ್ ಪುರಸಭೆಯ ಅಧಿಕಾರಿಗಳನ್ನು ಸ್ವಚ್ಚತಾ ಅಭಿಯಾನ ಮತ್ತು ರಕ್ತದಾನ ಅಭಿಯಾನಕ್ಕಾಗಿ ಇಂತಹ ಘೋಷಣೆಗಳನ್ನು ಬರೆಯಲು ಸಂಪರ್ಕಿಸಿತ್ತು. ಅದಕ್ಕೆ ಪುರಸಭೆ ಅನುಮತಿ ಸಹ ನೀಡಿತ್ತು. ಆ ಪರಿಣಾಮ ಈಗ ಇಂತಹ ಘೋಷಣೆಗಳು ರಸ್ತೆ ಬದಿ ಅಳವಡಿಸಲಾದ ಹೋರ್ಡಿಂಗ್‌ಗಳಲ್ಲಿ ಕಾಣಿಸಿಕೊಂಡಿವೆ.
ನಗರದ ಜನತೆ ಅಧಿಕಾರಿಗಳನ್ನು ಟ್ರೋಲ್ ಮಾಡಲು ಆರಂಭಿಸಿದ ಕೂಡಲೇ ಪಾಲಿಕೆ ವತಿಯಿಂದ ಘೋಷಣೆಗಳನ್ನು ತೆಗೆದು ಹಾಕಲಾಗಿದೆ. ತೆಗೆದು ಹಾಕಲು ಸಾಧ್ಯವಾಗದ ಕಡೆಗಳೆಲ್ಲೆಲ್ಲ ಕಪ್ಪು ಬಣ್ಣ ಬಳಿಯಲಾಗಿದೆ.
ಈ ಬಗ್ಗೆ ಮಾತನಾಡಿರುವ ಭಿಂಡ್ ಮುಖ್ಯ ಮುನ್ಸಿಪಲ್ ಆಫೀಸರ್ ವೀರೇಂದ್ರ ಕುಮಾರ್ ತಿವಾರಿ, “ನವಜೀವನ ಸಹಾಯಾರ್ಥ ಸಂಘಟನೆಯು ರಕ್ತದಾನದ ಪ್ರಚಾರಕ್ಕೆ ಸಂಬಂಧಿಸಿದ ಘೋಷಣೆಗಳನ್ನು ಬರೆಯಲು ಅನುಮತಿ ಪಡೆದಿತ್ತು. ರಕ್ತದಾನದ ಬಗ್ಗೆ ಘೋಷಣೆಗಳನ್ನು ಬರೆಯುವುದರ ಜೊತೆಗೆ, ಸಂಸ್ಥೆಗೆ ಸ್ವಚ್ಛತೆಯ ಬಗ್ಗೆ ಘೋಷಣೆಗಳನ್ನು ಬರೆಯಲು ಅನುಮತಿ ಕೊಟ್ಟಿದ್ದೆವು. ಆದರೆ, ಇಂತಹ ಆಕ್ಷೇಪಾರ್ಹ ಘೋಷಣೆಗಳನ್ನು ಬರೆಯುವುದು ತಪ್ಪು. ವಿವಾದಾತ್ಮಕ ಘೋಷಣೆಗಳನ್ನು ನಮ್ಮ ಗಮನಕ್ಕೆ ತಂದಾಗ ತಕ್ಷಣವೇ ತೆಗೆದುಹಾಕಲಾಗಿದೆ‘‘ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದನ್ನು ಓದಿ: ಅಯ್ಯೋ ಪಾಪ! ನದಿಗೆ ಹಾರಿ ಬಾರದ ಲೋಕಕ್ಕೆ ತೆರಳಿದ ಯುವತಿ.. ಆಕೆಯ ಚಪ್ಪಲಿ ಬಳಿಯೇ ಕಾದು ಕುಳಿತ ಸಾಕುನಾಯಿ..