ಶ್ರೀ ಗಂಗಾನಗರ (ರಾಜಸ್ಥಾನ): ರಾಜಸ್ಥಾನದ ಶ್ರೀ ಗಂಗಾನಗರದಲ್ಲಿ ಸೋಮವಾರ ಮಹಿಳಾ ಬ್ಯಾಂಕ್ ಮ್ಯಾನೇಜರ್ವೊಬ್ಬರು ಆಯುಧದಾರಿ ದರೋಡೆಕೋರನ ವಿರುದ್ಧ ಧೈರ್ಯದಿಂದ ಹೋರಾಡಿ ಸಾಹಸ ಮೆರೆದಿದ್ದಾರೆ. ಜೊತೆಗೆ ಬ್ಯಾಂಕ್‌ನ ಹಣ ಹಾಗೂ ಸಿಬ್ಬಂದಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರ್‌ಎಂಜಿಬಿ ಗ್ರಾಮೀಣ ಬ್ಯಾಂಕ್‌ಗೆ ಚಾಕು ಹಿಡಿದು ಪ್ರವೇಶಿಸಿದ ಕಿಡಿಗೇಡಿಯೊಬ್ಬ ಅಲ್ಲಿದ್ದ ಸಿಬ್ಬಂದಿಯನ್ನು ಹೆದರಿಸಲು ಪ್ರಯತ್ನಿಸಿದ್ದಾನೆ. ಗುರುತು ಸಿಗದಂತೆ ಮುಖವನ್ನು ಬಟ್ಟೆಯಿಂದ ಮುಚ್ಚಿಕೊಂಡಿದ್ದ ಆತ, ಎಲ್ಲ ಕಡೆಯೂ ಚಾಕು ಹಿಡಿದು ಓಡಾಡಿದ್ದಾನೆ. ಈ ವೇಳೆ ಬ್ಯಾಂಕ್ ಮ್ಯಾನೇಜರ್ ಪೂನಂ ಗುಪ್ತಾ ಅವರು, ತನ್ನ ಕೈಯಲ್ಲಿ ಇಕ್ಕಳ ಹಿಡಿದು, ದರೋಡೆಕೋರನನ್ನು ಎದುರಿಸಿದ್ದಾರೆ. ಕೆಲವು ನಿಮಿಷಗಳ ಕಾಲ ಪ್ರಯತ್ನಿಸಿದ ಖದೀಮ, ತನ್ನ ಯೋಜನೆ ವಿಫಲವಾಗುವುದು ಅರಿವಾಗುತ್ತಿದ್ದಂತೆ ಅಲ್ಲಿಂದ ಓಟ ಕಿತ್ತಿದ್ದಾನೆ. ವಿಫಲವಾದ ಬ್ಯಾಂಕ್ ದರೋಡೆಯ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಘಟನೆಯ ಬಗ್ಗೆ ಮಾತನಾಡಿದ ಪೂನಂ, 'ನಾನು ದುಷ್ಕರ್ಮಿಯನ್ನು ಎದುರಿಸುತ್ತಿರುವಾಗ ಬ್ಯಾಂಕ್‌ನ ಸುರಕ್ಷತೆಯ ಕುರಿತು ನನ್ನ ಮನಸ್ಸಿನಲ್ಲಿ ಆಲೋಚಿಸಿದೆ. ಬ್ಯಾಂಕ್ ಸಾರ್ವಜನಿಕರ ಆಸ್ತಿ. ಆದ್ದರಿಂದ ನಾನು ಹೇಗೆ ಹಣ ತೆಗೆದುಕೊಂಡು ಹೋಗಲು ಬಿಡಲಿ. ಮೊದಲು ನನಗೆ ಸ್ವಲ್ಪ ಭಯವಾಯಿತು. ಬಳಿಕ ದುಷ್ಕರ್ಮಿಯನ್ನು ಧೈರ್ಯದಿಂದ ಎದುರಿಸಲು ನಿರ್ಧರಿಸಿ, ಅದರಲ್ಲಿ ನಾವು ಯಶಸ್ವಿಯಾದೆವು. ಈ ಸಮಯದಲ್ಲಿ ಬ್ಯಾಂಕ್‌ನ ಇತರೆ ಉದ್ಯೋಗಿಗಳು ಸಹ ನನಗೆ ಬೆಂಬಲ ನೀಡಿದರು' ಎಂದರು.
ಇದನ್ನೂ ಓದಿ: ಹಾಡಹಗಲೇ ಸಚಿವರ ಸಹೋದರನ ಮನೆಗೆ ನುಗ್ಗಿ ಒಂದು ಕೋಟಿ ರೂಪಾಯಿ ದರೋಡೆ
ಬಳಿಕ ಮಾತನಾಡಿದ ಬ್ಯಾಂಕ್‌ನ ಎರಡನೇ ಶಾಖಾ ವ್ಯವಸ್ಥಾಪಕ ಪ್ರದೀಪ್ ಬಿಷ್ಣೋಯ್, 'ದರೋಡೆಕೋರ ಬ್ಯಾಂಕ್ ಮ್ಯಾನೇಜರ್ ಜೊತೆ ಜಗಳವಾಡಿದಾಗ ನಾನು ಕೂಡ ಧೈರ್ಯ ಮಾಡಿ ದುಷ್ಕರ್ಮಿಗಳನ್ನು ಎದುರಿಸಲು ನಿರ್ಧರಿಸಿದೆ, ದರೋಡೆಕೋರನ ಕೈಯಲ್ಲಿ ಚಾಕು ಇತ್ತು. ನನ್ನ ದೇಹದ ಮೇಲೆ ಕೆಲವು ಸಣ್ಣಪುಟ್ಟ ಗಾಯಗಳಾಗಿವೆ. ದರೋಡೆಕೋರ ಹೊರಗೆ ಓಡಿ ಹೋದಾಗ ಸ್ಕೂಟರ್‌ನಲ್ಲಿ ಸವಾರಿ ಮಾಡಲು ಪ್ರಯತ್ನಿಸಿದ. ಈ ವೇಳೆ ನಾವು ಅವನನ್ನು ಕೆಳಗೆ ತಳ್ಳಿ ಹಿಡಿದೆವು. ಬ್ಯಾಂಕ್ ನಲ್ಲಿ 30 ಲಕ್ಷ ರೂ.ನಗದು ಇದ್ದು, ಬ್ಯಾಂಕ್ ಮ್ಯಾನೇಜರ್ ಧೈರ್ಯದಿಂದ ಕಳ್ಳತನವಾಗುವುದನ್ನು ತಪ್ಪಿಸಲಾಗಿದೆ' ಎಂದು ಘಟನೆಯ ಬಗ್ಗೆ ವಿವರಿಸಿದ್ದಾರೆ.