ಇಂದೋರ್(ಮಧ್ಯಪ್ರದೇಶ): ವಿವಾಹಿತ ಮಹಿಳೆಯೊಬ್ಬಳ ಮೆಲೆ ಪಾಗಲ್ ಪ್ರೇಮಿಯೊಬ್ಬ ಬ್ಲೇಡ್ನಿಂದ ಹಲ್ಲೆ ನಡೆಸಿರುವ ಘಟನೆ ನಡೆದಿದ್ದು, ಮಧ್ಯಪ್ರದೇಶದ ಆಜಾದ್ ನಗರದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿರುವುದಾಗಿ ಬೆಳಕಿಗೆ ಬಂದಿದೆ.
ಕಳೆದ ಕೆಲ ವರ್ಷಗಳಿಂದ ಯುವಕನೊಬ್ಬ ವಿವಾಹಿತ ಮಹಿಳೆಯ ಪ್ರೀತಿಯಲ್ಲಿ ಬಿದ್ದಿದ್ದನು. ಆಕೆಯನ್ನ ಮಾತನಾಡಿಸುವ ಉದ್ದೇಶದಿಂದ ಬಲವಂತವಾಗಿ ಮನೆಗೆ ನುಗ್ಗಿದ್ದಾನೆ. ಈ ವೇಳೆ ಮಹಿಳೆ ಆತನೊಂದಿಗೆ ಮಾತನಾಡಲು ನಿರಾಕರಣೆ ಮಾಡಿದ್ದಾಳೆ. ತಕ್ಷಣವೇ ಜೇಬಿನಿಂದ ಬ್ಲೇಡ್ ಹೊರಗೆ ತೆಗೆದು ಆಕೆಯ ಮುಖದ ಮೇಲೆ ದಾಳಿ ಮಾಡಿದ್ದಾನೆ.
ಘಟನೆಯಿಂದ ಗಂಭೀರವಾಗಿ ಗಾಯಗೊಂಡಿರುವ ಮಹಿಳೆಯನ್ನ ಎಂವೈ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆಕೆಗೆ 47 ಹೊಲಿಗೆ ಹಾಕಲಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಹಲ್ಲೆ ಮಾಡಲು ಮುಂದಾದ ಸಂದರ್ಭದಲ್ಲಿ ಮಹಿಳೆಯ ರಕ್ಷಣೆಗೆ ಮುಂದಾಗಿರುವ ಸಹೋದರನೊಬ್ಬನ ಮೇಲೂ ಹಲ್ಲೆ ನಡೆಸಲಾಗಿದೆ. ಇದರಿಂದ ಆತನಿಗೂ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆ. ಮಹಿಳೆಗೆ ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದು, ಈಗಾಗಲೇ ಮೂವರು ಮಕ್ಕಳಿದ್ದಾರೆ. ಇದೀಗ ತಾಯಿಯ ಮನೆಗೆ ಬಂದಿದ್ದು, ಆರೋಪಿ ಯುವಕ ಆಕೆಯೊಂದಿಗೆ ಮಾತನಾಡಲು ಬಂದಾಗ ಈ ಕೃತ್ಯವೆಸಗಿದ್ದಾನೆ.
ಇದನ್ನೂ ಓದಿರಿ: ಅರೇ ಬಾಪ್ ರೇ! ಹೆಲ್ಮೆಟ್ ಹಾಕಿಲ್ಲವೆಂದು ಕಾರ್ ಡ್ರೈವರ್ಗೆ ಸಾವಿರ ರೂ. ದಂಡ!
ಘಟನೆಗೆ ಸಂಬಂಧಿಸಿದಂತೆ ಮಾತನಾಡಿರುವ ಯುವತಿ ತಂದೆ, ಕಳೆದ ಮೂರು ವರ್ಷಗಳಿಂದಲೂ ಆತ ಕಿರುಕುಳ ನೀಡುತ್ತಿದ್ದಾನೆ. ನನ್ನ ಮಗಳೊಂದಿಗೆ ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದನು. ಆದರೆ, ನಾವು ಬೇರೆ ಕಡೆ ಮದುವೆ ಮಾಡಿಕೊಟ್ಟಿದ್ದೇವೆ. ಆರೋಪಿಗೂ ಕೂಡ ಇಬ್ಬರು ಮಕ್ಕಳಿದ್ದಾರೆ.
ಇದೇ ಮೊದಲ ಸಲ ಮಗಳು ನಮ್ಮ ಮನೆಗೆ ಬಂದಿದ್ದು, ಈ ವೇಳೆ ಹಲ್ಲೆ ನಡೆಸಿದ್ದಾನೆ ಎಂದು ಹೇಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತನ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.