ಡಿಂಡೋರಿ( ಮಧ್ಯಪ್ರದೇಶ): ಕಿಸಾಲ್‌ಪುರಿ ಗ್ರಾಮದ ರಸ್ತೆಬದಿಯ ಸರ್ಕಾರಿ ಮನೆಯಲ್ಲಿ ತಡರಾತ್ರಿ ಹಠಾತ್ ಬೆಂಕಿ ಕಾಣಿಸಿಕೊಂಡಿದ್ದು, ತಾಯಿ ಸೇರಿದಂತೆ ಇಬ್ಬರು ಮಕ್ಕಳು ಸಜೀವ ದಹನವಾಗಿದ್ದಾರೆ.
ಮೋಹನ್ ವನ್ವಾಸಿಗೆ ಸರ್ಕಾರಿ ವಸತಿ ನೀಡಲಾಗಿತ್ತು. ಅವರು ಕೆಲಸಕ್ಕೆ ಹೋದ ಸಮಯದಲ್ಲಿ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಮೋಹನ್ ಪತ್ನಿ ಮತ್ತು ಇಬ್ಬರು ಮಕ್ಕಳು ಸೇರಿದಂತೆ ಮೂವರೂ ಸಾವನ್ನಪ್ಪಿದರು. ಈ ಘಟನೆಯ ಬಗ್ಗೆ ನೆರೆಹೊರೆಯವರಿಗೆ ತಿಳಿದಿರದೇ ಇರುವುದು ದುರಂತವೇ ಸರಿ.
ಬೆಂಕಿಯಿಂದ ಕಿರುಚಾಟವಾಗಲಿ, ರೋಧನವಾಗಲಿ ಮನೆಯಿಂದ ಕೇಳಿ ಬಂದಿಲ್ಲವೆಂಬುದು ನೆರೆಹೊರೆಯವರ ಮಾತಾಗಿದೆ.
ಸಪ್ನಾ ವನ್ವಾಸಿ (31), ರಿಷಭ್ ವನ್ವಾಸಿ (4), ಜಾನ್ವಿ ವನ್ವಾಸಿ (6) ಬೆಂಕಿಯಲ್ಲಿ ಸುಟ್ಟು ಸಾವನ್ನಪ್ಪಿರುವುದರ ಬಗ್ಗೆ ಬೆಳಗ್ಗೆ ತಿಳಿದು ಬಂದಿದೆ. ಬೆಂಕಿ ಎಷ್ಟು ಭೀಕರವಾಗಿತ್ತೆಂದರೆ ರಸ್ತೆಬದಿಯ ಎರಡು ಅಂಗಡಿಗಳೂ ಸುಟ್ಟುಹೋಗಿವೆ. ಈ ಘಟನೆ ಬಗ್ಗೆ ಶಂಕೆ ವ್ಯಕ್ತವಾಗುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.