ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯನ್ನು ಕಾಂಗ್ರೆಸ್ ಕೋಟೆ ಎಂದು ಪರಿಗಣಿಸಲಾಗುತ್ತಿತ್ತು. ಜೊತೆಗೆ ಜಿಲ್ಲೆಯ ಸಂಸದ ದಿವಂಗತ ಗನಿ ಖಾನ್ ಚೌಧರಿ ಅವರ ಕೋಟೆ ಎಂದು ಹೆಚ್ಚು ಹೇಳಲಾಗಿತ್ತು. ಆ ಜಿಲ್ಲೆಯ ವಿಧಾನಸಭಾ ಕ್ಷೇತ್ರಕ್ಕೆ ಏಪ್ರಿಲ್ 29 ರಂದು ಮತದಾನ ನಡೆದಿದ್ದು, ಶಾಂತಿಯುತವಾಗಿ ಕೊನೆಯ ಹಂತದಲ್ಲಿ ಜಿಲ್ಲೆಯಲ್ಲಿ ಮತದಾನ ಪ್ರಕ್ರಿಯೆ ಮುಗಿದಿದೆ.
ಗಣಿ ಖಾನ್ ಚೌಧರಿ ಅವರ ವರ್ಚಸ್ಸಿನಿಂದಾಗಿ, ಅವರ ಮರಣದ ನಂತರವೂ, ಕಾಂಗ್ರೆಸ್ ಈ ಜಿಲ್ಲೆಯಲ್ಲಿ ಸ್ವಲ್ಪ ಸಮಯದವರೆಗೆ ತನ್ನ ವರ್ಚಸ್ಸು ಉಳಿಸಿಕೊಂಡಿದೆ. ಖಾನ್ ಸಾವಿಗೆ ಮುನ್ನ ಅವರ ಸಹೋದರಿ ರೂಬಿ ನೂರ್ ಹೊರತು ಪಡಿಸಿ ಖಾನ್ ಕುಟುಂಬದಿಂದ ಯಾರೂ ರಾಜಕೀಯದಲ್ಲಿ ಸಕ್ರಿಯರಾಗಿರಲ್ಲ. ಆದರೆ, ಅವರ ಮರಣದ ನಂತರ ಅದೇ ಕುಟುಂಬವು ಆ ಜಿಲ್ಲೆಯ ಅನೇಕ ಸಂಸದರು ಮತ್ತು ಶಾಸಕರನ್ನು ಉಡುಗೊರೆಯಾಗಿ ನೀಡಿತು. ಗಣಿ ಖಾನ್ ಚೌಧರಿಯವರ ಇಬ್ಬರು ಸಹೋದರರು, ಒಬ್ಬ ಸೋದರಳಿಯ ಮತ್ತು ಒಬ್ಬ ಸೋದರ ಸೊಸೆ ಸೇರಿ ಎಲ್ಲರೂ ಸದ್ಯ ರಾಜಕಾರಣದಲ್ಲಿ ಬ್ಯೂಸಿಯಾಗಿದ್ದಾರೆ. ದಿವಂಗತ ನಾಯಕನೊಬ್ಬನ ವರ್ಚಸ್ಸು ಅವರ ಕುಟುಂಬ ಸದಸ್ಯರಿಗೆ ದೀರ್ಘಕಾಲದವರೆಗೆ ವಿವಿಧ ಚುನಾವಣೆಗಳಲ್ಲಿ ಜಯಗಳಿಸಲು ಸಹಾಯ ಮಾಡುವುದು ಬಹಳ ಅಪರೂಪ.
ಈಗಲು ಮಾಲ್ಡಾದಲ್ಲಿ ಯಾವುದೇ ಅಭಿಯಾನ ಅಥವಾ ರ್ಯಾಲಿ ಪ್ರಾರಂಭಿಸುವ ಮೊದಲು ಎಲ್ಲ ಪಕ್ಷಗಳು ಖಾನ್ರವರಿಗೆ ಗೌರವ ಸಲ್ಲಿಸುತ್ತವೆ. ತೃಣಮೂಲ ಕಾಂಗ್ರೆಸ್ ಆಳ್ವಿಕೆಯಲ್ಲಿಯೂ ಸಹ, ಮಮತಾ ಬ್ಯಾನರ್ಜಿ ಅವರ ಪಕ್ಷವು ಜಿಲ್ಲೆಯಲ್ಲಿ ಹೆಚ್ಚು ಮುನ್ನಡೆಯಲು ಸಾಧ್ಯವಾಗಲಿಲ್ಲ.
2019 ರ ಲೋಕಸಭಾ ಚುನಾವಣೆಯಲ್ಲಿ ಮಾತ್ರ ಜಿಲ್ಲೆಯ ಎರಡು ಲೋಕಸಭಾ ಕ್ಷೇತ್ರಗಳಲ್ಲಿ ಒಂದನ್ನು ಗೆಲ್ಲುವ ಮೂಲಕ ಬಿಜೆಪಿ ಮಾಲ್ಡಾದಲ್ಲಿ ಹೊಸ ದಾಖಲೆ ಬರೆಯಿತು. ಆದ್ದರಿಂದ 2021 ರಲ್ಲಿ, ಮಾಲ್ಡಾದ ಜನರು ಯಾರಿಗೆ ಜೈ ಅಂದಿದ್ದರೆ ಎನ್ನುವುದು ಸಾಕಷ್ಟು ಕುತೂಹಲ ಕೆರಳಿಸಿದೆ.
ಕೇಸರಿ ಪಕ್ಷ ಈ ಬಾರಿ ಮಾಲ್ಡಾದಲ್ಲಿ ಮತ್ತಷ್ಟು ಅಧಿಕಾರ ವಿಸ್ತರಿಸಿಕೊಳ್ಳಲಿದೆಯೇ? ನೋಡಬೇಕು. ಆದರೆ, ತಮ್ಮ ಅಭಿಯಾನಗಳಲ್ಲಿ ಬಿಜೆಪಿ ನಾಯಕರು ದಿವಂಗತ ಕಾಂಗ್ರೆಸ್ ಮುಖಂಡರನ್ನು ಉಲ್ಲೇಖಿಸಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್ ಮಾಲ್ಡಾದಲ್ಲಿ ತನ್ನ ಕೋಟೆ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆಯೇ ಎಂಬ ಮತ್ತೊಂದು ಕುತೂಹಲ ಸಹ ಇದೆ. ಈ ಎಲ್ಲಾ ಕುತೂಹಲಗಳಿಗೆ ಮೇ 2ರ ಫಲಿತಾಂಶ ತೆರೆ ಎಳೆಯಲಿದೆ.