ಅಮರಾವತಿ: ಮಹಾಮಾರಿ ಕೊರೊನಾ ವೈರಸ್ ಕಾರಣ ದೇಶದ ಅನೇಕ ರಾಜ್ಯಗಳು ಮಕ್ಕಳ ಹಿತದೃಷ್ಠಿಯಿಂದ 10 ಹಾಗೂ 12ನೇ ತರಗತಿ ಪರೀಕ್ಷೆ ರದ್ದು ಮಾಡಿ ಆದೇಶ ಹೊರಡಿಸಿವೆ. ಇದರ ಮಧ್ಯೆ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್ ಜಗನಮೋಹನ್ ರೆಡ್ಡಿ ಬೋರ್ಡ್ ಪರೀಕ್ಷೆ ನಡೆಸುವ ನಿರ್ಧಾರ ಕೈಗೊಂಡಿದ್ದಾರೆ.
ವಿದ್ಯಾರ್ಥಿಗಳ ಉತ್ತಮ ಭವಿಷ್ಯದ ದೃಷ್ಠಿಯಿಂದ ನಾವು ಪರೀಕ್ಷೆ ನಡೆಸಲು ನಿರ್ಧರಿಸಿದ್ದು, ಈ ನಿರ್ಧಾರ ತೆಗೆದುಕೊಳ್ಳುವಾಗ ಪ್ರತಿಯೊಬ್ಬ ವಿದ್ಯಾರ್ಥಿಯ ಭವಿಷ್ಯ ಗಮನದಲ್ಲಿಟ್ಟುಕೊಳ್ಳಲಾಗಿದೆ ಎಂದಿದ್ದಾರೆ.
ಪರೀಕ್ಷೆ ನಡೆಸದ ರಾಜ್ಯಗಳು ವಿದ್ಯಾರ್ಥಿಗಳಿಗೆ ಪಾಸ್ ಪ್ರಮಾಣ ಪತ್ರ ಮಾತ್ರ ನೀಡಲು ಮುಂದಾಗಿವೆ. ಈ ಪ್ರಮಾಣ ಪತ್ರಗಳ ಆಧಾರದ ಮೇಲೆ ನಮ್ಮ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆದುಕೊಳ್ಳುವುದು ಹೇಗೆ? ಎಂದು ಪ್ರಶ್ನೆ ಮಾಡಿದ್ದಾರೆ. ಪ್ರಸಕ್ತ ಸನ್ನಿವೇಶದಲ್ಲಿ ಪರೀಕ್ಷೆ ನಡೆಸಬೇಕೆ ಅಥವಾ ಬೇಡವೇ ಎಂದು ನಿರ್ಧರಿಸಲು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಅಧಿಕಾರ ನೀಡಿವೆ. ಕೆಲವೊಂದು ರಾಜ್ಯ ಕಠಿಣ ಕ್ರಮ ಅನುಸರಿಸಿ ಪರೀಕ್ಷೆ ನಡೆಸುತ್ತಿವೆ ಎಂದರು.
ಇದನ್ನೂ ಓದಿ: ನಿಮಿಷಕ್ಕೆ 27 ಲಕ್ಷ ಜನರಿಂದ ನೋಂದಣಿ.. ಕೋವಿನ್, ಆರೋಗ್ಯ ಸೇತು ಸರ್ವರ್ ಡೌನ್ಗೆ ಕಾರಣ
10 ಹಾಗೂ 12ನೇ ತರಗತಿ ಪರೀಕ್ಷೆ ವಿದ್ಯಾರ್ಥಿಗಳ ಭವಿಷ್ಯದ ದೃಷ್ಠಿಯಿಂದ ತೆಗೆದುಕೊಳ್ಳಬೇಕಾಗಿದ್ದು, ರಾಜ್ಯದ ಪ್ರತಿಯೊಬ್ಬ ವಿದ್ಯಾರ್ಥಿಯ ಸುರಕ್ಷತೆ ಬಗ್ಗೆ ಸರ್ಕಾರ ಖಾತರಿ ನೀಡುತ್ತದೆ ಎಂದು ಭರವಸೆ ನೀಡಿದ್ದಾರೆ.
ಮಹಾಮಾರಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿರುವ ಕಾರಣ ಈಗಾಗಲೇ ಕೇಂದ್ರ ಶಿಕ್ಷಣ ಮಂಡಳಿ ಕೂಡ ಸಿಬಿಎಸ್ಇ 10 ಹಾಗೂ 12ನೇ ತರಗತಿ ಪರೀಕ್ಷೆ ರದ್ಧುಗೊಳಿಸಿ ಮಹತ್ವದ ಆದೇಶ ಹೊರಡಿಸಿವೆ.