ಬಂಕುರಾ (ಪಶ್ಚಿಮ ಬಂಗಾಳ) ಬಟ್ಲಾ ಹೌಸ್ ಪ್ರಕರಣದ ಅಪರಾಧಿಗೆ ಮರಣದಂಡನೆ ಶಿಕ್ಷೆ ವಿಧಿಸಿದ ದೆಹಲಿ ನ್ಯಾಯಾಲಯದ ತೀರ್ಪು ಉಲ್ಲೇಖಿಸಿ ಮಾತನಾಡಿದ ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ, ಮಮತಾ ಬ್ಯಾನರ್ಜಿ ಯಾವಾಗ ರಾಜಕೀಯದಿಂದ ನಿವೃತ್ತಿ ಪಡೆಯುತ್ತೀರಿ ಎಂದು ಕೇಳಿದರು.
ಕೋಟುಲ್ಪುರದಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಮಮತಾ ಜೀ ಅವರು ಬಾಟ್ಲಾ ಹೌಸ್ ಎನ್‌ಕೌಂಟರ್ ಅನ್ನು ನಕಲಿ ಎಂದು ಕರೆದಿದ್ದರು. ಹಾಗೆಯೇ ಅದು ಅಸಲಿಯೇ ಆದರೆ ರಾಜಕೀಯ ತೊರೆಯುವುದಾಗಿ ಹೇಳಿದ್ದರು. ನ್ಯಾಯಾಲಯ ಈಗ ಅರಿಜ್ ಖಾನ್‌ಗೆ ಮರಣದಂಡನೆ ಶಿಕ್ಷೆ ವಿಧಿಸಿದೆ. ಈಗ ಮಮತಾ ಜೀ ಅವರನ್ನು ಕೇಳುತ್ತೇನೆ, ನೀವು ಯಾವಾಗ ರಾಜಕೀಯವನ್ನು ತೊರೆಯುತ್ತೀರಿ? ಎಂದು ಕಿಡಿಕಾರಿದ್ದಾರೆ.
ಬಾಟ್ಲಾಹೌಸ್ ಎನ್‌ಕೌಂಟರ್ ತೀರ್ಪು
2008 ರ ಬಟ್ಲಾ ಹೌಸ್ ಎನ್‌ಕೌಂಟರ್ ಪ್ರಕರಣದ ಅಪರಾಧಿ ಅರಿಜ್ ಖಾನ್ ಕೃತ್ಯವನ್ನು 'ಅಪರೂಪದಲ್ಲಿ ಅಪರೂಪದ ಪ್ರಕರಣ' ಎಂದು ದೆಹಲಿ ನ್ಯಾಯಾಲಯ ತಿಳಿಸಿದ್ದು, ಅಪರಾಧಿಗೆ ಮರಣದಂಡನೆ ವಿಧಿಸಿದೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸಂದೀಪ್ ಯಾದವ್ ಅಪರಾಧಿಗೆ 11 ಲಕ್ಷ ರೂ.ಗಳ ದಂಡ ವಿಧಿಸಿದ್ದಾರೆ ಮತ್ತು ಮೃತ ಮೋಹನ್ ಚಂದ್ ಶರ್ಮಾ ಅವರ ಕುಟುಂಬಕ್ಕೆ ಪರಿಹಾರವಾಗಿ 10 ಲಕ್ಷ ರೂ. ನೀಡಲು ಸೂಚಿಸಿದ್ದಾರೆ.
ಏನಿದು ಪ್ರಕರಣ?
13 ಸೆಪ್ಟೆಂಬರ್ 2008 ರಂದು ದೆಹಲಿಯಲ್ಲಿ ಐದು ಸರಣಿ ಸ್ಫೋಟಗಳು ಸಂಭವಿಸಿದ ಒಂದು ವಾರದ ನಂತರ ಈ ಘಟನೆ ನಡೆದಿತ್ತು. ಇದರಲ್ಲಿ ಕನಿಷ್ಠ 30 ಜನರು ಸಾವಿಗೀಡಾಗಿದ್ದರು. 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಹಾಗೆಯೇ ಇನ್ಸ್‌ಪೆಕ್ಟರ್ ಮೋಹನ್ ಚಂದ್ ಶರ್ಮಾ ಅವರನ್ನು 2008 ರ ಬಟ್ಲಾ ಹೌಸ್ ಆಪರೇಷನ್ನಲ್ಲಿ ಹತ್ಯೆ ಮಾಡಲಾಗಿತ್ತು.
ಬಂಗಾಳದ ವಿಧಾನಸಭೆ ಚುನಾವಣೆ
294 ಸದಸ್ಯರ ಪಶ್ಚಿಮ ಬಂಗಾಳ ವಿಧಾನಸಭೆಗೆ ಚುನಾವಣೆ ಮಾರ್ಚ್ 27 ರಿಂದ ಎಂಟು ಹಂತಗಳಲ್ಲಿ ನಡೆಯಲಿದ್ದು, ಅಂತಿಮ ಸುತ್ತಿನ ಮತದಾನ ಏಪ್ರಿಲ್ 29 ರಂದು ನಡೆಯಲಿದೆ. ಮತ ಎಣಿಕೆ ಮೇ ತಿಂಗಳಲ್ಲಿ ನಡೆಯಲಿದೆ.