ಹೈದರಾಬಾದ್ (ತೆಲಂಗಾಣ): ವಾಟ್ಸ್ಆ್ಯಪ್ ಇಂಡಿಯಾದ ಮುಖ್ಯಸ್ಥ ಅಭಿಜಿತ್ ಬೋಸ್ ಮತ್ತು ಫೇಸ್‌ಬುಕ್ ಪಬ್ಲಿಕ್ ಪಾಲಿಸಿ ಡೈರೆಕ್ಟರ್ ರಾಜೀವ್ ಅಗರ್ವಾಲ್ ಮಂಗಳವಾರ ತಮ್ಮ ಸ್ಥಾನದಿಂದ ಕೆಳಗಿಳಿದ್ದಾರೆ. ವಾಟ್ಸ್ಆ್ಯಪ್ ಮತ್ತು ಫೇಸ್‌ಬುಕ್ ಎರಡೂ ಸಂಸ್ಥೆಗಳ ಒಡೆತನವನ್ನು ಹೊಂದಿರುವ ಮೆಟಾ ನವೆಂಬರ್ 9ರಂದು ಏಕಾಏಕಿ 11 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಬೆನ್ನಲ್ಲೇ ಪ್ರಮುಖ ಹುದ್ದೆಗಳು ತೆರವಾಗಿವೆ.
ಪ್ರಸ್ತುತ ಭಾರತದಲ್ಲಿನ ಎಲ್ಲ ಮೆಟಾ ಬ್ರಾಂಡ್‌ಗಳಿಗೆ ಸಾರ್ವಜನಿಕ ನೀತಿ ನಿರ್ದೇಶಕರಾಗಿ ನೇಮಕಗೊಂಡಿರುವ ವಾಟ್ಸ್ಆ್ಯಪ್ ಸಾರ್ವಜನಿಕ ನೀತಿ ನಿರ್ದೇಶಕ ಶಿವನಾಥ್ ತುಕ್ರಾಲ್ ಅವರು ರಾಜೀವ್ ಅಗರ್ವಾಲ್ ಅವರನ್ನು ಬದಲಿಸಲು ಸಿದ್ಧರಾಗಿದ್ದಾರೆ, ಆದರೆ, ವಾಟ್ಸ್ಆ್ಯಪ್ ಇಂಡಿಯಾದ ಮುಖ್ಯಸ್ಥ ಅಭಿಜಿತ್ ಬೋಸ್ ಅವರಿಂದ ತೆರವಾದ ಸ್ಥಾನವನ್ನು ಯಾರು ತುಂಬುತ್ತಾರೆ ಎಂಬುದು ಸ್ಪಷ್ಟವಾಗಿಲ್ಲ.
ಭಾರತದಲ್ಲಿ ನಮ್ಮ ಮೊದಲ ವಾಟ್ಸ್ಆ್ಯಪ್ ಮುಖ್ಯಸ್ಥರಾಗಿ ಅಭಿಜಿತ್ ಬೋಸ್ ನೀಡಿದ ಅಪಾರ ಕೊಡುಗೆಗಳಿಗಾಗಿ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಅವರ ಉದ್ಯಮಶೀಲತೆಯು ನಮ್ಮ ತಂಡಕ್ಕೆ ಹೊಸ ಸೇವೆಗಳನ್ನು ನೀಡಲು ಸಹಾಯ ಮಾಡಿತ್ತು. ಅದು ಲಕ್ಷಾಂತರ ಜನರು ಮತ್ತು ವ್ಯವಹಾರಗಳಿಗೆ ಪ್ರಯೋಜನವೂ ಆಗಿದೆ ಎಂದು ವಾಟ್ಸ್ಆ್ಯಪ್ ಮುಖ್ಯಸ್ಥ ವಿಲ್ ಕ್ಯಾತ್‌ಕಾರ್ಟ್ ತಿಳಿಸಿದ್ದಾರೆ.
ಅಲ್ಲದೇ, ಭಾರತಕ್ಕಾಗಿ ವಾಟ್ಸ್ಆ್ಯಪ್ ಇನ್ನೂ ಹೆಚ್ಚಿನದನ್ನು ಮಾಡಬಹುದು ಮತ್ತು ಭಾರತದ ಡಿಜಿಟಲ್ ಪರಿವರ್ತನೆವನ್ನು ಮುಂದುವರಿಸಲು ಸಹಾಯ ಮಾಡುವುದನ್ನು ಮುಂದುವರಿಸಲು ನಾವು ಉತ್ಸುಕರಾಗಿದ್ದೇವೆ ಎಂದು ವಿಲ್ ಕ್ಯಾತ್‌ಕಾರ್ಟ್ ತಮ್ಮ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.
ಇದನ್ನೂ ಓದಿ: ಬರೋಬ್ಬರಿ 11 ಸಾವಿರ ಉದ್ಯೋಗಿಗಳ ವಜಾಗೊಳಿಸಿದ ಮೆಟಾ