ಪುರ್ಬಾ ಮದಿನಿಪುರ (ಪಶ್ಚಿಮ ಬಂಗಾಳ): ಇಂದು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಸ್ವಾಗತಿಸಲು ಪುರ್ಬಾ ಮದಿನಿಪುರ ಜಿಲ್ಲೆಯ ಹಲ್ಡಿಯಾ ಪ್ರದೇಶದಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ.
ಪಶ್ಚಿಮ ಬಂಗಾಳದ ಹಲ್ಡಿಯಾದಲ್ಲಿ ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ ನಿರ್ಮಿಸಿದ ಎಲ್‌ಪಿಜಿ ಆಮದು ಟರ್ಮಿನಲ್ ಲೋಕಾರ್ಪಣೆಗೆ ಪ್ರಧಾನಿ ನಿರ್ಧರಿಸಿದ್ದಾರೆ.
"ನಾನು ಪಶ್ಚಿಮ ಬಂಗಾಳದ ಹಲ್ಡಿಯಾಕ್ಕೆ ಭೇಟಿ ನೀಡಲಿದ್ದೇನೆ. ಅಲ್ಲಿ ನಡೆಯುವ ಕಾರ್ಯಕ್ರಮದಲ್ಲಿ, ಬಿಪಿಸಿಎಲ್ ನಿರ್ಮಿಸಿದ ಎಲ್‌ಪಿಜಿ ಆಮದು ಟರ್ಮಿನಲ್ ಅನ್ನು ರಾಷ್ಟ್ರಕ್ಕೆ ಅರ್ಪಿಸಲಿದ್ದೇನೆ. ಪ್ರಧಾನ್ ಮಂತ್ರಿ ಉರ್ಜಾ ಗಂಗಾ ಯೋಜನೆಯ ರಾಷ್ಟ್ರ ದೋಬಿ-ದುರ್ಗಾಪುರ ನೈಸರ್ಗಿಕ ಅನಿಲ ಪೈಪ್‌ಲೈನ್ ವಿಭಾಗಕ್ಕೂ ಚಾಲನೆ ನೀಡಲಿದ್ದೇನೆ" ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಖಾಕಿಯೊಳಗಿನ ಕಲಾವಿದ : ಚಿತ್ರಕಲೆಯಲ್ಲಿ ಸಾಧನೆ ಮಾಡಿದ ಪೊಲೀಸ್..
ಪ್ರಧಾನಿ ಮೋದಿ ಅವರು ಇಂದು ಅಸ್ಸೋಂ ಮತ್ತು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿದ್ದಾರೆ. ಅಧಿಕೃತ ಪ್ರಕಟಣೆಯ ಪ್ರಕಾರ, ಪ್ರಧಾನ ಮಂತ್ರಿ ಮೋದಿ ಬೆಳಗ್ಗೆ 11.45 ರ ಸುಮಾರಿಗೆ ಎರಡು ಆಸ್ಪತ್ರೆಗಳಿಗೆ ಅಡಿಪಾಯ ಹಾಕಲಿದ್ದಾರೆ. ರಾಜ್ಯ ಹೆದ್ದಾರಿಗಳು ಮತ್ತು ಪ್ರಮುಖ ಜಿಲ್ಲಾ ರಸ್ತೆಗಳ ಕಾರ್ಯಕ್ರಮ 'ಅಸ್ಸೋಂ ಮಾಲಾ' ಅನ್ನು ಸೋನಿತ್ಪುರ ಜಿಲ್ಲೆಯ ಧೇಕಿಯಾಜುಲಿಯಲ್ಲಿ ಪ್ರಾರಂಭಿಸಲಿದ್ದಾರೆ.
ನಂತರ ಸಂಜೆ 4.50 ರ ಸುಮಾರಿಗೆ ಪಶ್ಚಿಮ ಬಂಗಾಳದ ಹಲ್ಡಿಯಾದಲ್ಲಿ ಪ್ರಮುಖ ಮೂಲಸೌಕರ್ಯ ಯೋಜನೆಗಳಿಗೆ ಅಡಿಪಾಯ ಹಾಕಲಿದ್ದಾರೆ.