ಸಾಲ್ಟೋರಾ(ಪಶ್ಚಿಮ ಬಂಗಾಳ): ಪಂಚರಾಜ್ಯ ಚುನಾವಣೆ ಫಲಿತಾಂಶ ನಿನ್ನೆ ಬಹಿರಂಗಗೊಂಡಿದ್ದು, ಕೆಲವೊಂದು ಕ್ಷೇತ್ರಗಳಲ್ಲಿ ಯಾರೋ ಊಹೆ ಮಾಡದ ರೀತಿ ಫಲಿತಾಂಶ ಬಹಿರಂಗಗೊಂಡಿದೆ. ಅಂತಹ ಘಟನೆವೊಂದು ಪಶ್ಚಿಮ ಬಂಗಾಳದಲ್ಲಿ ನಡೆದಿದೆ.
ಕೂಲಿ ಕಾರ್ಮಿಕನ ಪತ್ನಿಯೊಬ್ಬಳು ಕೋಟಿ ಒಡೆಯನಿಗೆ ಸೋಲಿನ ರುಚಿ ತೂರಿಸುವ ಮೂಲಕ ಚುನಾವಣಾ ಇತಿಹಾಸದಲ್ಲಿ ಹೊಸದೊಂದು ಮೈಲಿಗಲ್ಲು ನಿರ್ಮಿಸಿದ್ದಾರೆ. ಈ ಸಾಧನೆ ಮಾಡಿದ್ದು ಬಿಜೆಪಿ ಅಭ್ಯರ್ಥಿ ಚಂದನಾ ಬೌರಿ.
ಪಶ್ಚಿಮ ಬಂಗಾಳದ ಸಾಲ್ಟೋರಾ ವಿಧಾನಸಭಾ ಕ್ಷೇತ್ರದಿಂದ ಟಿಎಂಸಿ ಅಭ್ಯರ್ಥಿ ಎದುರು ಸ್ಪರ್ಧೆ ಮಾಡಿದ್ದ ಇವರು 4 ಸಾವಿರ ಮತಗಳ ಅಂತರದಿಂದ ಗೆಲುವು ದಾಖಲು ಮಾಡಿದ್ದಾರೆ. ಚುನಾವಣೆಯಲ್ಲಿ ಎದುರಾಳಿ ಟಿಎಂಸಿಯ ಸಂತೋಷ್ ಕುಮಾರ್ ಮಂಡಲ್ ಸೋಲು ಕಂಡಿದ್ದಾರೆ.
30 ವರ್ಷದ ಚಂದನಾ ಕೂಲಿ ಕಾರ್ಮಿಕನ ಪತ್ನಿಯಾಗಿದ್ದು, ಬ್ಯಾಂಕ್ ಖಾತೆಯಲ್ಲಿ 31 ಸಾವಿರ 985 ರೂ ಮಾತ್ರ ಇದೆ. ಇವರ ಪತಿ ದಿನಗೂಲಿ ಕೆಲಸಗಾರನಾಗಿದ್ದು, ಮೂರು ಮಕ್ಕಳಿದ್ದಾರೆ. 10ನೇ ತರಗತಿ ಪಾಸ್ ಮಾಡಿರುವ ಇವರು ಕೂಲಿ ಕೆಲಸ ಮಾಡುತ್ತಿದ್ದರು. ಸಾಲ್ಟೋರಾ ಮೀಸಲು ಕ್ಷೇತ್ರ ಆಗಿದ್ದ ಕಾರಣ ಬಿಜೆಪಿ ಪಕ್ಷದಿಂದ ಕಣಕ್ಕಿಳಿದು ಇದೀಗ ಗೆಲುವಿನ ನಗೆ ಬೀರಿದಿದ್ದಾರೆ. ಈ ಚುನಾವಣೆಯಲ್ಲಿ ಚಂದನಾ ಬೌರಿ ಒಟ್ಟು 91,648 ಮತ ಪಡೆದುಕೊಂಡಿದ್ದರೆ, ಟಿಎಂಸಿ ಅಭ್ಯರ್ಥಿ ಸಂತೋಷ್ ಕುಮಾರ್ 87,503 ಮತ ಪಡೆದಿದ್ದಾರೆ.
ಚುನಾವಣೆಯಲ್ಲಿ ಚಂದನಾ ಗೆಲುವು ದಾಖಲು ಮಾಡುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ಮಹಾಪೂರವೇ ಹರಿದು ಬರುತ್ತಿದ್ದು, ಆಕೆಯ ಗೆಲುವಿಗೆ ಎಲ್ಲರೂ ಅಭಿನಂದನೆ ಸಲ್ಲಿಕೆ ಮಾಡಿದ್ದಾರೆ.
ಪಶ್ಚಿಮ ಬಂಗಾಳದ 292 ಕ್ಷೇತ್ರಗಳ ಪೈಕಿ ತೃಣಮೂಲ ಕಾಂಗ್ರೆಸ್ 213 ಕ್ಷೇತ್ರಗಳಲ್ಲಿ ಗೆಲುವು ದಾಖಲು ಮಾಡಿದ್ದು, ಬಿಜೆಪಿ 77 ಸ್ಥಾನದಲ್ಲಿ ಗೆಲುವಿನ ನಗೆ ಬೀರಿದೆ. ಈ ಮೂಲಕ ಟಿಎಂಸಿ ಹ್ಯಾಟ್ರಿಕ್ ಗೆಲುವು ದಾಖಲು ಮಾಡಿದೆ.