ಕೋಲ್ಕತಾ(ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳ ಉಪ ಚುಣಾವಣೆಯ ಮತ ಎಣಿಕೆ ಕಾರ್ಯ ಇಂದು ನಡೆಯಲಿದೆ. ಸಿಎಂ ಮಮತಾ ಬ್ಯಾನರ್ಜಿ ಸ್ಪರ್ಧಿಸಿರುವ ಭವಾನಿಪುರ ವಿಧಾನಸಭಾ ಕ್ಷೇತ್ರದ ಫಲಿತಾಂಶದ ಮೇಲೆ ಇದೀಗ ಎಲ್ಲರ ಕಣ್ಣು ನೆಟ್ಟಿದೆ.
ಪ.ಬಂಗಾಳದಲ್ಲಿ ಒಟ್ಟು 3 ವಿಧಾನಸಭಾ ಕ್ಷೇತ್ರಗಳಿ ಸೆಪ್ಟೆಂಬರ್ 30ರಂದು ಉಪಚುನಾವಣೆ ನಡೆದಿತ್ತು. ಭವಾನಿಪುರ ಕ್ಷೇತ್ರದಲ್ಲಿ ಶೇ. 53.32ರಷ್ಟು, ಸಂಸರ್ಗಂಜ್ನಲ್ಲಿ ಶೇ 78.60 ಹಾಗೂ ಜಂಗೀಪುರ್ದಲ್ಲಿ ಶೇ. 76.12ರಷ್ಟು ವೋಟಿಂಗ್ ಆಗಿತ್ತು.
ಇಂದು ಬೆಳಗ್ಗೆ 8 ಗಂಟೆಗೆ ಬಿಗಿ ಭದ್ರತೆಯಲ್ಲಿ ಮೂರು ಕ್ಷೇತ್ರಗಳ ಮತ ಎಣಿಕೆ ಆರಂಭವಾಗಲಿದೆ. ಮತ ಎಣಿಕೆ ನಡೆಯುವ ಪ್ರದೇಶಗಳಲ್ಲಿ ಮೂರು ಹಂತದ ಭದ್ರತೆಯ ವ್ಯವಸ್ಥೆ ಮಾಡಲಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಭದ್ರತಾ ಪಡೆಗಳು ಈಗಾಗಲೇ ಬೀಡುಬಿಟ್ಟಿವೆ. ಮತ ಎಣಿಕೆ ನಡೆಯುವ ಎಲ್ಲಾ ಪ್ರದೇಶಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ.
ಸುವೇಂದು ವಿರುದ್ಧ ಸೋತಿದ್ದ ಮಮತಾ
ಈ ಮೊದಲು ನಂದಿಗ್ರಾಮದಿಂದ ಕಣಕ್ಕಿಳಿದಿದ್ದ ಮಮತಾ ಬ್ಯಾನರ್ಜಿ ಬಿಜೆಪಿಯ ಸುವೇಂದು ಅಧಿಕಾರಿ ವಿರುದ್ಧ ಸೋಲು ಕಂಡಿದ್ದರು. ಈಗ ಭವಾನಿಪುರ ಕ್ಷೇತ್ರದಿಂದ ಕಣಕ್ಕಿಳಿದಿದ್ದು, ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿ ಇದ್ದಾರೆ. ಬ್ಯಾನರ್ಜಿ ವಿರುದ್ಧ ಬಿಜೆಪಿಯಿಂದ ಪ್ರಿಯಾಂಕಾ ಟಿಬ್ರೇವಾಲ್ ಸ್ಪರ್ಧಿಸಿದ್ದಾರೆ.
ಒಂದು ವೇಳೆ ಮತ್ತೆ ಸೋಲಾದರೆ?
ಒಂದು ವೇಳೆ ಭವಾನಿಪುರದಿಂದ ಮಮತಾ ಬ್ಯಾನರ್ಜಿ ಸೋತರೆ ಅವರು, ಸಿಎಂ ಸ್ಥಾನ ತ್ಯಾಗ ಮಾಡಲೇಬೇಕಾಗುತ್ತದೆ ಅಥವಾ ಬೇರೊಬ್ಬರಿಗೆ ಬಿಟ್ಟುಕೊಡಬೇಕಾಗಬಹುದು. ಪಶ್ಚಿಮ ಬಂಗಾಳದಲ್ಲಿ ವಿಧಾನಪರಿಷತ್ ಇಲ್ಲ. ಈ ಕಾರಣದಿಂದ ಅವರು ಮೇಲ್ಮನೆ ಸದಸ್ಯತ್ವ ಪಡೆದು ಸಿಎಂ ಸ್ಥಾನದಲ್ಲಿ ಮುಂದುವರೆಯುವ ಪ್ರಶ್ನೆಯೇ ಬರುವುದಿಲ್ಲ.
ಇದನ್ನೂ ಓದಿ: ಕೋವಿಡ್ ಮಧ್ಯೆ ಕೇರಳದಲ್ಲಿ ಅ.25ರಿಂದ ಚಿತ್ರಮಂದಿರ ಓಪನ್, ನ.1ರಿಂದ ಶಾಲೆ ಆರಂಭ..