ಮುಂಬೈ: ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಮತ್ತು ಮಹಾರಾಷ್ಟ್ರದ ನಡುವಿನ ಉದ್ವಿಗ್ನತೆ ಮುಂದುವರೆದಿರುವ ಬೆನ್ನಲ್ಲೇ ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ ಬಣ) ನಾಯಕ ಸಂಜಯ್ ರಾವುತ್, ಚೀನಾ ಭಾರತದೊಳಕ್ಕೆ ನುಗ್ಗಿದಂತೆ ನಾವು ಕರ್ನಾಟಕದೊಳಗೆ ನುಗ್ಗಲಿದ್ದೇವೆ ಎಂಬ ಹೇಳಿಕೆ ನೀಡಿ ವಿವಾದದ ಕಾವು ಹೆಚ್ಚಿಸಿದ್ದಾರೆ.
ಚೀನಾ ಪ್ರವೇಶಿಸಿದಂತೆ ನಾವೂ (ಕರ್ನಾಟಕ) ಪ್ರವೇಶಿಸುತ್ತೇವೆ. ಇದಕ್ಕಾಗಿ ನಮಗೆ ಯಾರ ಅನುಮತಿಯೂ ಬೇಕಾಗಿಲ್ಲ. ವಿವಾದವನ್ನು ಚರ್ಚೆಯ ಮೂಲಕ ಬಗೆಹರಿಸಲು ಬಯಸುತ್ತೇವೆ, ಆದರೆ ಕರ್ನಾಟಕದ ಸಿಎಂ ಬೆಂಕಿ ಹಚ್ಚುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ದುರ್ಬಲ ಸರ್ಕಾರವಿದೆ ಮತ್ತು ಈ ಬಗ್ಗೆ ಅವರು ಯಾವುದೇ ನಿಲುವು ತೆಗೆದುಕೊಳ್ಳುತ್ತಿಲ್ಲ ಎಂದು ಸಂಜಯ್ ರಾವುತ್ ಹೇಳಿದರು.
ದಶಕಗಳಷ್ಟು ಹಳೆಯದಾದ ಗಡಿ ಸಂಘರ್ಷದ ಕುರಿತು ಮಹಾರಾಷ್ಟ್ರ ಮತ್ತು ಕರ್ನಾಟಕದ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ಸಮಯದಲ್ಲೇ ಮಹಾರಾಷ್ಟ್ರ ರಾಜಕೀಯ ನಾಯಕ ಇಂಥ ಹೇಳಿಕೆ ನೀಡಿದ್ದಾರೆ. ಗಡಿ ವಿವಾದದ ವಿಚಾರಣೆ ಸದ್ಯ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದೆ. ಆದಾಗ್ಯೂ ಏಕನಾಥ್ ಶಿಂಧೆ ಸರ್ಕಾರ ಈ ವಿಷಯದಲ್ಲಿ ಟೀಕೆಗೆ ಗುರಿಯಾಗಿದ್ದು, ಮಹಾರಾಷ್ಟ್ರ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಪ್ರತಿಪಕ್ಷಗಳ ಆಕ್ರೋಶಕ್ಕೆ ಗುರಿಯಾಗಿದೆ.
ಇದನ್ನೂ ಓದಿ: ಬೆಳಗಾವಿಗೆ ಭೇಟಿ ನೀಡುವುದಾಗಿ ಶಿವಸೇನೆ ಸಂಸದ ಧೈರ್ಯಶೀಲ ಮಾನೆ ಪತ್ರ