ನವದೆಹಲಿ: ಕೇಂದ್ರ ಸರ್ಕಾರ ನೂತನ ಕೃಷಿ ಕಾಯ್ದೆಗಳ ವಿರೋಧಿಸಿ ರಾಷ್ಟ್ರ ರಾಜಧಾನಿಯಲ್ಲಿ ರೈತರ ಪ್ರತಿಭಟನೆ ಜರುಗುತ್ತಿದೆ. ಗುರುವಾರ ವಿಜ್ಞಾನ ಭವನದಲ್ಲಿ ರೈತ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಕೇಂದ್ರ ಸರ್ಕಾರದ ನಡುವೆ ಸಭೆ ಹಾಗೂ ಮಾತುಕತೆಗಳು ನಡೆಯುತ್ತಿದ್ದು, ಸರ್ಕಾರ ನೀಡುವ ಆಹಾರವನ್ನು ಬಹಿಷ್ಕರಿಸಲು ರೈತ ಸಂಘಟನೆಗಳು ನಿರ್ಧಾರ ಮಾಡಿವೆ.
"ನಾವು ಸರ್ಕಾರ ನೀಡುವ ಆಹಾರ ಅಥವಾ ಚಹಾ ಸ್ವೀಕರಿಸುತ್ತಿಲ್ಲ. ನಾವು ನಮ್ಮದೇ ಆಹಾರವನ್ನು ತಂದಿದ್ದೇವೆ, ಅದನ್ನೇ ನಾವು ತಿನ್ನುತ್ತೇವೆ" ಎಂದು ರೈತ ಮುಖಂಡರು ಹೇಳಿದ್ದಾರೆ.
ಕೇಂದ್ರ ಮತ್ತು ರೈತ ಪ್ರತಿನಿಧಿಗಳ ನಡುವೆ ಗುರುವಾರ ಮಧ್ಯಾಹ್ನ ನಾಲ್ಕನೇ ಸುತ್ತಿನ ಮಾತುಕತೆ ನಡೆಯುತ್ತಿದ್ದು, ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮತ್ತು ಕೇಂದ್ರ ಸಚಿವ ಪಿಯೂಷ್ ಗೋಯಲ್ ಕೇಂದ್ರ ಸರ್ಕಾರದ ಪರವಾಗಿ ಭಾಗವಹಿಸಿದ್ದಾರೆ.
ಇದನ್ನೂ ಓದಿ: ಪಟ್ಟು ಬಿಡದ ಅನ್ನದಾತರು: ಪಂಜಾಬ್ ರೈತರ ಮನವೊಲಿಸುವಲ್ಲಿ ಬಿಜೆಪಿ ವಿಫಲ?
ಸಭೆಗೂ ಮೊದಲು ಮಾತನಾಡಿದ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಇಂದಿನ ಸಭೆ ಸಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತದೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಮೂರನೇ ಸುತ್ತಿನ ಮಾತುಕತೆ ನಡೆದಿದ್ದು, ಕೇಂದ್ರ ಸರ್ಕಾರ ಸಮಿತಿ ರಚನೆಗೆ ಒಲವು ತೋರಿತ್ತು. ಇದನ್ನು ರೈತ ಸಂಘಟನೆಗಳು ತಿರಸ್ಕರಿಸಿದ್ದು, ಕಾಯ್ದೆಗಳನ್ನು ಸಂಪೂರ್ಣವಾಗಿ ರದ್ದು ಮಾಡಬೇಕೆಂಬ ಒತ್ತಾಯ ಮುಂದುವರೆಸಿದ್ದವು.
ಇದೇ ವೇಳೆ,ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ನಿರ್ಧಾರ ತೆಗೆದುಕೊಳ್ಳಲು ಸರ್ಕಾರಕ್ಕೆ ಗುರುವಾರ ಕೊನೆಯ ಅವಕಾಶವಾಗಿದ್ದು, ಇಲ್ಲವೆಂದರೆ ಪ್ರತಿಭಟನೆಗಳು ಉಗ್ರ ಸ್ವರೂಪ ತಾಳಲಿವೆ ಎಂದು ಲೋಕ ಸಂಘರ್ಷ ಮೋರ್ಚಾದ ಮುಖ್ಯಸ್ಥರಾದ ಪ್ರತಿಭಾ ಶಿಂಧೆ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.