ನವದೆಹಲಿ: ನಿಸ್ಸಂದೇಹವಾಗಿ ಜಾರಿ ನಿರ್ದೇಶನಾಲಯ ಕಾನೂನನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಕಾರಣ ನಾವು ಕಾನೂನು ಕಾಪಾಡುವುದಕ್ಕಾಗಿ ಹೋರಾಟ ನಡೆಸುತ್ತಿದ್ದೇವೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಪಿ ಚಿದಂಬರ್ ಆರೋಪಿಸಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಇಡಿ ಕಾನೂನನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ. ಒಂದುವೇಳೆ ಇಡಿ ಕಾನೂನು ನಿಯಮಗಳನ್ನು ಪಾಲಿಸಿದ್ದೇ ಆದಲ್ಲಿ ಅದಕ್ಕೆ ನಮ್ಮ ಯಾವುದೇ ತಕರಾರಿಲ್ಲ. ಕಳೆದ 4-5 ವರ್ಷದಿಂದ ಬಿಜೆಪಿ ನಾಯಕರ ವಿರುದ್ಧವಾಗಲಿ ಅಥವಾ ಬಿಜೆಪಿ ಆಡಳಿತವಿರುವ ರಾಜ್ಯದಲ್ಲಾಗಲಿ ಜಾರೀ ನಿದೇರ್ಶನಾಲಯ ಯಾವುದಾದರು ಪ್ರಕರಣವನ್ನು ದಾಖಲಿಸಿದೆಯಾ ಎಂದು ಚಿದಂಬರಂ ಪ್ರಶ್ನಿಸಿದ್ದಾರೆ.
ಓದಿ: ಪೊಲೀಸರು ವಶಕ್ಕೆ ಪಡೆಯಲು ಬಂದಾಗ ಓಟಕಿತ್ತ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ: ವಿಡಿಯೋ
ಕಾನೂನಿನ ದುರುಪಯೋಗದ ವಿರುದ್ಧ ನಾವು ಪ್ರತಿಭಟಿಸುತ್ತಿದ್ದೇವೆ. ಇಡಿ ಕಾನೂನನ್ನು ಅನುಸರಿಸಿದರೆ ನಮಗೆ ಯಾವುದೇ ಸಮಸ್ಯೆ ಇಲ್ಲ. ಆದರೆ ಇಡಿ ಕಾನೂನನ್ನು ಅನುಸರಿಸುತ್ತಿಲ್ಲ. ನಾವು ಕಾನೂನನ್ನು ಕಾಪಾಡುವುದಕ್ಕಾಗಿ ಹೋರಾಟ ನಡೆಸುತ್ತಿದ್ದೇವೆ. ನಿಗದಿತ ಅಪರಾಧ ಯಾವುದೆಂದು ನಾವು ಕೇಳುತ್ತಿದ್ದೇವೆ. ಅವರ ಬಳಿ ಉತ್ತರವಿಲ್ಲ. ಯಾವ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಅಂತಾ ಕೇಳಿದ್ರೂ ಉತ್ತರವಿಲ್ಲ. ಎಫ್‌ಐಆರ್ ಪ್ರತಿ ಇಲ್ಲ ಎಂದು ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಹೇಳಿದರು.
ನಾವು ಗಾಂಧೀಜಿ ವಾರಸುದಾರರು: ನಾವು ಮಹಾತ್ಮ ಗಾಂಧೀಜಿ ಅವರ ವಾರಸುದಾರರು, ಮತ್ತೊಮ್ಮೆ ನಡೆಯುತ್ತೇವೆ. ನಮ್ಮ ಸತ್ಯಾಗ್ರಹ ನಿಲ್ಲುವುದಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್ ಎಚ್ಚರಿಕೆ ನೀಡಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಇಡಿ ವಿಚಾರಣೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ನಮ್ಮ ದೇಶದ ನೆಲವನ್ನು ಚೀನಾ ವಶಪಡಿಸಿಕೊಂಡಿದೆ. ಹಣದುಬ್ಬರ, ಇಂಧನ ಬೆಲೆ ಏರಿಕೆ, ನಿರುದ್ಯೋಗ, ಧಾರ್ಮಿಕ ಪ್ರತೀಕಾರದಂತಹ ವಿಷಯಗಳು ದುತ್ತೆಂದು ಎದ್ದು ಕುಳಿತಿವೆ. ಈ ಬಗ್ಗೆ ಮೋದಿ ಸರ್ಕಾರವನ್ನು ಯಾವಾಗಲೂ ಪ್ರಶ್ನಿಸಿರುವ ರಾಹುಲ್ ಗಾಂಧಿ ವಿರುದ್ಧ ಇಡಿ ತನಿಖೆ ನಡೆಸಲಾಗುತ್ತಿದೆ. ಈ ಮೂಲಕ ಅವರ ಧ್ವನಿಯನ್ನು ಮೂಟಕುಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ರಣದೀಪ್ ಸುರ್ಜೆವಾಲಾ ಆರೋಪಿಸಿದ್ದಾರೆ.
ಕಳೆದ 50 ವರ್ಷಗಳಲ್ಲಿ ದೇಶ ಅತಿ ದೊಡ್ಡ ನಿರುದ್ಯೋಗದ ಸಂಕಷ್ಟ ಎದುರಿಸುತ್ತಿದೆ. 75 ವರ್ಷಗಳಲ್ಲೇ ರೂಪಾಯಿ ಅತ್ಯಂತ ಕಡಿಮೆ ಮೌಲ್ಯಕ್ಕೆ ಕುಸಿದಿದೆ. ಎಂದು ಸುರ್ಜೇವಾಲಾ ಹರಿಹಾಯ್ದಿದ್ದಾರೆ.