ವಾರಾಣಸಿ (ಉತ್ತರ ಪ್ರದೇಶ): ವಿಶ್ವನಾಥನ ದರ್ಶನಕ್ಕಾಗಿ ಗಂಗಾ ಘಾಟ್‌ಗಳ ಮೂಲಕ ಭಕ್ತರ ಪಾದಯಾತ್ರೆಯನ್ನು ಹೆಚ್ಚಿಸಲು, ಗಂಗಾ ನದಿಯಲ್ಲಿ ವಾಟರ್ ಟ್ಯಾಕ್ಸಿ ಸಂಚಾರ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಈ ಬಗ್ಗೆ ವಾರಾಣಸಿ ಆಯುಕ್ತ ಕೌಶಲ್ ರಾಜ್ ಶರ್ಮಾ ಅವರು ಮಾಹಿತಿ ಖಚಿತಪಡಿಸಿದ್ದಾರೆ.
ಯೋಜನೆಯ ಕಾಮಗಾರಿ ಆರಂಭವಾಗಿದೆ. ನದಿ ನೀರಿನ ಮಾರ್ಗವನ್ನು ಜನಪ್ರಿಯಗೊಳಿಸುವುದು ಮತ್ತು ವಾರಾಣಸಿ ರಸ್ತೆಗಳ ದಟ್ಟಣೆಯನ್ನು ಕಡಿಮೆ ಮಾಡುವುದು ಯೋಜನೆಯ ಉದ್ದೇಶವಾಗಿದೆ. ವಾಟರ್ ಟ್ಯಾಕ್ಸಿಯ ಪರಿಚಯವು ಪ್ರವಾಸಿಗರು ಗಂಗಾ ದ್ವಾರಕ್ಕೆ (ಪ್ರವೇಶ ದ್ವಾರ) ಆಗಮಿಸುವ ಮೊದಲು ಗಂಗಾ ಘಾಟ್‌ಗಳ ಉದ್ದಕ್ಕೂ ಪ್ರವಾಸಿಗರಿಗೆ ದೃಶ್ಯ ವೀಕ್ಷಣೆಯ ಉದ್ದೇಶವನ್ನು ಪೂರೈಸುತ್ತದೆ. ಅಲ್ಲಿಂದ ಭಕ್ತರು ಕಾಶಿ ವಿಶ್ವನಾಥ ದೇಗುಲವನ್ನು ಪ್ರವೇಶಿಸುತ್ತಾರೆ ಎಂದು ಅವರು ಹೇಳಿದ್ದಾರೆ.
ವಾರಾಣಸಿ ಆಡಳಿತವು ಎರಡು ಗಂಗಾ ಘಾಟ್‌ಗಳನ್ನು ಆಯ್ಕೆ ಮಾಡಿದೆ. ಮೊದಲನೆಯದು ನಮೋ ಘಾಟ್ ಮತ್ತು ಇನ್ನೊಂದು ರವಿದಾಸ್ ಘಾಟ್. ಅಲ್ಲಿಂದ ಒಂದು ಗಂಟೆಯ ಮಧ್ಯಂತರದಲ್ಲಿ ನೀರಿನ ಟ್ಯಾಕ್ಸಿ ಲಭ್ಯವಿರುತ್ತದೆ. ವಾಟರ್ ಟ್ಯಾಕ್ಸಿ ಅಳವಡಿಕೆಯಿಂದ ರಸ್ತೆಯಲ್ಲಿ ಸಂಚಾರ ದಟ್ಟಣೆ ಕಡಿಮೆ ಆಗಲಿದೆ. ವಾಟರ್ ಟ್ಯಾಕ್ಸಿ ಯೋಜನೆಯನ್ನು ವಾರಾಣಸಿ ಆಡಳಿತ ಮತ್ತು ವಿಶ್ವನಾಥ ದೇವಸ್ಥಾನದ ಆಡಳಿತ ಸಮಿತಿ ಜಂಟಿಯಾಗಿ ಅನುಷ್ಠಾನಗೊಳಿಸಲಿದೆ.
ಯೋಜನೆಯ ಬಗ್ಗೆ ಮಾಹಿತಿಯನ್ನು ನೀಡಿದ ವಾರಾಣಸಿ ಆಯುಕ್ತ ಕೌಶಲ್ ರಾಜ್ ಶರ್ಮಾ, "ನಾವು ಭಗವಾನ್ ವಿಶ್ವನಾಥ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸಮನ್ವಯದಲ್ಲಿ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದೇವೆ. ಸೇವೆಯು ನಾಮಮಾತ್ರ ದರದಲ್ಲಿ ಭಕ್ತರಿಗೆ ಲಭ್ಯವಿರುತ್ತದೆ. ಆದರೂ ವಾಟರ್ ಟ್ಯಾಕ್ಸಿ ಬಾಡಿಗೆಗೆ ಶುಲ್ಕ ಎಂದು ನಿರ್ಧರಿಸಲಾಗಿಲ್ಲ. ಆದರೆ, ಈ ನಿಟ್ಟಿನಲ್ಲಿ ಶೀಘ್ರದಲ್ಲೇ ಟೆಂಡರ್ ಕರೆಯಲಾಗುವುದು. ಆರಂಭಿಕ ಅವಧಿಯಲ್ಲಿ, ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ (CNG) ನಲ್ಲಿ ಚಲಿಸುವ ಮೋಟಾರ್ ಚಾಲಿತ ಹಡಗುಗಳನ್ನು ಸೇವೆಗೆ ಬಳಸಲಾಗುತ್ತದೆ. ನಂತರ ಮಾಲಿನ್ಯ ಮುಕ್ತ ಪ್ರಯಾಣಕ್ಕಾಗಿ ಸೋಲಾರ್ ಬ್ಯಾಟರಿಯಲ್ಲಿ ಕಾರ್ಯನಿರ್ವಹಿಸುವ ದೋಣಿಗಳನ್ನು ಪರಿಚಯಿಸಲಾಗುವುದು ಎಂದು ಆಯುಕ್ತರು ತಿಳಿಸಿದ್ದಾರೆ.
ವಾಟರ್ ಟ್ಯಾಕ್ಸಿ ಎಂದರೆ ಏನು?: ಆಕ್ಸ್‌ಫರ್ಡ್ ಡಿಕ್ಷನರಿಯ ಪ್ರಕಾರ, ವಾಟರ್ ಟ್ಯಾಕ್ಸಿ ಎಂದರೆ, 'ನದಿಗಳು, ಕಾಲುವೆಗಳು ಇತ್ಯಾದಿಗಳಲ್ಲಿ ಹಣ ಪಾವತಿಸುವ ಪ್ರಯಾಣಿಕರನ್ನು ಸಾಗಿಸಲು ಇರುವ ಒಂದು ಸಣ್ಣ ದೋಣಿಯಾಗಿದೆ. ಇದನ್ನೇ ಇಂಗ್ಲಿಷ್ನಲ್ಲಿ ವಾಟರ್ ಟ್ಯಾಕ್ಷಿ ಎಂದು ಕರೆಯಲಾಗುತ್ತದೆ.
ಮುಂಬೈ ವಾಟರ್ ಟ್ಯಾಕ್ಸಿ ಸೇವೆ ಪಡೆದ ಮೊದಲ ನಗರ: ದೇಶದ ಪ್ರಪ್ರಥಮ ಅತ್ಯಾಧುನಿಕ ವಾಟರ್ ಟ್ಯಾಕ್ಸಿ ಸೇವೆಗಳನ್ನು ಪಡೆಯಲಿರುವ ನಗರ ಎಂಬ ಖ್ಯಾತಿಗೆ ಮುಂಬೈ ಈಗಾಗಲೇ ಪಾತ್ರವಾಗಿದೆ. ನವಿ ಮುಂಬೈನ ನೆರೂಲ್, ಬೆಲಾಪುಟ್ ಮತ್ತು ಜೆಎನ್‌ಪಿಟಿಗೆ ದಕ್ಷಿಣ ಮುಂಬೈನ ಮಜಗಾನ್‌ನಲ್ಲಿರುವ ಕ್ರೂಸರ್ ಟರ್ಮಿನಲ್‌ನೊಂದಿಗೆ ಸಂಪರ್ಕ ವನ್ನು ಈ ವಾಟರ್ ಟ್ಯಾಕ್ಸಿಗಳ ಮೂಲಕ ಕಲ್ಪಿಸಲಾಗಿದೆ. ಹೀಗೆ ವಾಟರ್ ಟ್ಯಾಕ್ಸಿಗಳ ಮೂಲಕ ಸಂಪರ್ಕ ಕಲ್ಪಿಸಿದ್ದರಿಂದ ಬಹಳಷ್ಟು ಜನರಿಗೆ ಅನುಕೂಲವಾಗಿದೆ. ಅಷ್ಟೇ ಅಲ್ಲ ವಾಟರ್ ಟ್ಯಾಕ್ಷಿಗಳ ಮೂಲಕ ಪ್ರಯಾಣಿಸುವ ಪ್ರಯಾಣಿಕರಿಗೆ ಸುಮಾರು 25 ನಿಮಿಷ ಉಳಿತಾಯವಾಗಲಿದೆ ಎನ್ನುವುದು ವಿಶೇಷ.
ಇದನ್ನೂ ಓದಿ: ವಾಟರ್ ಟ್ಯಾಕ್ಸಿ ಮೂಲಕ ಕೇವಲ 30 ನಿಮಿಷಗಳಲ್ಲಿ ಮುಂಬೈಗೆ!