ಚೆನ್ನೈ (ತಮಿಳುನಾಡು): ನಾಳೆ ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮತದಾರರ ಪಟ್ಟಿಯಿಂದ ಮಾಜಿ ಸಿಎಂ ದಿವಂಗತೆ ಜಯಲಲಿತಾ ಆಪ್ತೆ ಹಾಗೂ ಎಐಎಡಿಎಂಕೆ ಉಚ್ಛಾಟಿತ ನಾಯಕಿ ವಿ.ಕೆ.ಶಶಿಕಲಾ ಅವರ ಹೆಸರೇ ನಾಪತ್ತೆಯಾಗಿರುವುದು ಕೋಲಾಹಲ ಮೂಡಿಸಿದೆ.
ಎರಡು ದಶಕಗಳಿಗಿಂತಲೂ ಹೆಚ್ಚು ಕಾಲದಿಂದ ಚೆನ್ನೈನ ಥೌಸಂಡ್ ಲೈಟ್ಸ್ ಕ್ಷೇತ್ರದಲ್ಲಿ ಚಿನ್ನಮ್ಮ ವೋಟ್ ಮಾಡುತ್ತಾ ಬಂದಿದ್ದಾರೆ. ಆದರೆ ಪೋಯೆಸ್ ಗಾರ್ಡನ್ನಲ್ಲಿ ಶಶಿಕಲಾ ಅವರ ಬೇನಾಮಿ ಆಸ್ತಿಯನ್ನು ಮುಟ್ಟುಗೋಲು ಹಾಕಿದ ಬಳಿಕ ಇವರ ಹೆಸರನ್ನು ವೋಟರ್ ಲಿಸ್ಟ್ನಿಂದ ಡಿಲಿಟ್ ಮಾಡಲಾಗಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಬಾರದೂರಿಗೆ ಪಯಣಿಸಿದ ಯೋಧರ ನೆನೆದು ಕಣ್ಣೀರ ಕಡಲಾದ ಕುಟುಂಬಸ್ಥರು
ಮತದಾನಕ್ಕೆ ಕೇವಲ ಒಂದು ದಿನ ಬಾಕಿ ಇರುವಾಗ ಶಶಿಕಲಾ ಹೆಸರು ಕಾಣೆಯಾಗಿರುವ ವಿಷಯ ಬೆಳಕಿಗೆ ಬಂದಿದ್ದು, ಇದರ ಹಿಂದೆ ಎಐಎಡಿಎಂಕೆ ಕೈವಾಡವಿದೆ ಎಂದು ಎಎಂಎಂಕೆ ಮುಖಂಡ ಟಿಟಿವಿ ದಿನಕರನ್ ಆರೋಪಿಸಿದ್ದಾರೆ.
ನಾಲ್ಕು ವರ್ಷ ಸೆರೆವಾಸ ಅನುಭವಿಸಿ, ಅನಾರೋಗ್ಯಕ್ಕೆ ತುತ್ತಾಗಿ, ಆಸ್ಪತ್ರೆಯಿಂದ ಬಿಡುಗಡೆಯಾಗಿ ಚೆನ್ನೈಗೆ ಹಿಂದಿರುಗಿದ ಬಳಿಕ ರಾಜಕಾರಣದಿಂದ ದೂರು ಉಳಿಯುವುದಾಗಿ ಚಿನ್ನಮ್ಮ ತಿಳಿಸಿದ್ದರು.