ಹೈದರಾಬಾದ್ (ತೆಲಂಗಾಣ): ಆಂಧ್ರ ಪ್ರದೇಶದ ಮಾಜಿ ಸಚಿವ ವಿವೇಕಾನಂದ ರೆಡ್ಡಿ ಹತ್ಯೆ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಕಡಪ ಸಂಸದ ಅವಿನಾಶ್ ರೆಡ್ಡಿ ಕೇಂದ್ರೀಯ ತನಿಖಾ ದಳ (ಸಿಬಿಐ)ದ ವಿಚಾರಣೆಗೆ ಹಾಜರಾಗಿಲ್ಲ. ತಮ್ಮ ತಾಯಿ ಶ್ರೀಲಕ್ಷ್ಮೀ ಅವರ ಅನಾರೋಗ್ಯದ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಅವರು ಸಿಬಿಐಗೆ ಪತ್ರ ಬರೆದಿದ್ದಾರೆ.
ತಾಯಿ ಶ್ರೀಲಕ್ಷ್ಮೀ ಅವರಿಗೆ ಹೃದಯಾಘಾತವಾಗಿದ್ದು, ಪುಲಿವೆಂದುಲದ ಇಸಿ ಗಂಗಿರೆಡ್ಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಸಂಸದ ಅವಿನಾಶ್ ತಮ್ಮ ಪತ್ರದಲ್ಲಿ ತಿಳಿಸಿದ್ದು, ಈ ಪತ್ರವನ್ನು ತಮ್ಮ ವಕೀಲರ ಮೂಲಕ ಸಿಬಿಐ ಕಚೇರಿಗೆ ತಲುಪಿಸಿದ್ದಾರೆ. ಸಿಬಿಐ ತನಿಖೆಗೆ ಕೊನೆ ಗಳಿಗೆಯಲ್ಲಿ ಅವಿನಾಶ್ ರೆಡ್ಡಿ ಗೈರು ಹಾಜರಾಗುತ್ತಿರುವುದು ಇದು ಎರಡನೇ ಬಾರಿಯಾಗಿದೆ. ಇದೇ ತಿಂಗಳ 16ರಂದು ವಿಚಾರಣೆಗೆ ಹಾಜರಾಗಬೇಕಿದ್ದರೂ ಪೂರ್ವ ನಿಗದಿ ಕಾರ್ಯಕ್ರಮಗಳನ್ನು ಉಲ್ಲೇಖಿಸಿ ಹೈದರಾಬಾದ್‌ನಿಂದ ಕಡಪಕ್ಕೆ ತೆರಳಿದ್ದರು. ಇದರಿಂದಾಗಿ ಸಿಬಿಐ ತಂಡ ತಕ್ಷಣವೇ ಕಡಪ ತೆರಳಿ, ಇಂದು ವಿಚಾರಣೆಗೆ ಬರುವಂತೆ ನೋಟಿಸ್ ನೀಡಿತ್ತು. ಇಂದು ಸಹ ವಿಚಾರಣೆಯಿಂದ ಅವಿನಾಶ್ ರೆಡ್ಡಿ ದೂರ ಉಳಿದಿದ್ದಾರೆ.
ಇದನ್ನೂ ಓದಿ: ಮಾಜಿ ಸಚಿವ ವೈಎಸ್ ವಿವೇಕ್ ಹತ್ಯೆ ಕೇಸ್: ವೈಎಸ್ ಭಾಸ್ಕರ್ ರೆಡ್ಡಿ ಸೇರಿ ಇಬ್ಬರು ಸಿಬಿಐ ಕಸ್ಟಡಿಗೆ, ಸಂಸದ ಅವಿನಾಶ್ಗೆ ಗ್ರಿಲ್
ಅವಿನಾಶ್ ರೆಡ್ಡಿ ಶುಕ್ರವಾರ ಬೆಳಗ್ಗೆ ಹೈದರಾಬಾದ್‌ನಲ್ಲಿರುವ ತಮ್ಮ ಮನೆಯಿಂದ ಸಿಬಿಐ ಕಚೇರಿಗೆ ತೆರಳಿದ್ದರು. ಆದರೆ, ಮಾರ್ಗಮಧ್ಯೆ ತಾಯಿ ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿರುವ ಮಾಹಿತಿ ಸಿಕ್ಕಿತು. ಇದರಿಂದ ಕೂಡಲೇ ಪುಲಿವೆಂದುಲಕ್ಕೆ ಹೊರಟೆವು ಎಂದು ವಕೀಲ ಮಲ್ಲಾರೆಡ್ಡಿ ತಿಳಿಸಿದ್ದಾರೆ. ತಂದೆ ಭಾಸ್ಕರ್ ರೆಡ್ಡಿ ಜೈಲಿನಲ್ಲಿರುವುದರಿಂದ ತಾಯಿಯನ್ನು ಅವಿನಾಶ್ ರೆಡ್ಡಿ ಅವರೇ ನೋಡಿಕೊಳ್ಳಬೇಕಾಗಿದೆ ಎಂದೂ ವಕೀಲರು ಸಮಜಾಯಿಷಿ ನೀಡಿದ್ದಾರೆ.
ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ದಿ. ವೈಎಸ್ ರಾಜಶೇಖರ್ ರೆಡ್ಡಿ ಅವರ ಸಹೋದರರಲ್ಲಿ ಒಬ್ಬರಾದ ವಿವೇಕಾನಂದ ರೆಡ್ಡಿ 2019ರಲ್ಲಿ ರಾಜ್ಯ ವಿಧಾನಸಭೆ ಚುನಾವಣೆಗೆ ಕೆಲ ವಾರಗಳ ಮೊದಲು ಎಂದರೆ, ಮಾರ್ಚ್ 15ರಂದು ಕಡಪಾ ಜಿಲ್ಲೆಯ ಪುಲಿವೆಂದುಲದಲ್ಲಿರುವ ತಮ್ಮ ನಿವಾಸದಲ್ಲಿ ಕೊಲೆಯಾಗಿದ್ದರು. ರಾಜಕೀಯ ಕಾರಣಕ್ಕಾಗಿ ಈ ಕೊಲೆ ನಡೆದಿದೆ ಎಂಬ ಸಂಶಯವಿದೆ. ಈ ಪ್ರಕರಣದಲ್ಲಿ ಇತ್ತೀಚೆಗೆ ಸಹೋದರ ಭಾಸ್ಕರ್ ರೆಡ್ಡಿ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ಸಂಸದ ಅವಿನಾಶ್ ರೆಡ್ಡಿ ಅವರು ಭಾಸ್ಕರ್ ರೆಡ್ಡಿ ಅವರ ಮಗನಾಗಿದ್ದಾರೆ.
ಈ ಹಿಂದೆ ಏಪ್ರಿಲ್ 19ರಿಂದ ಭಾಸ್ಕರ್ ರೆಡ್ಡಿ, ಮತ್ತೊಬ್ಬ ಆರೋಪಿ ಉದಯಕುಮಾರ್ ರೆಡ್ಡಿ ಹಾಗೂ ಸಂಸದ ಅವಿನಾಶ್ ರೆಡ್ಡಿ ಸೇರಿ ಮೂವರನ್ನು ಪ್ರತ್ಯೇಕವಾಗಿ ಸಿಬಿಐ ಅಧಿಕಾರಿಗಳು ಪ್ರಕರಣದ ವಿವಿಧ ಆಯಾಮಗಳ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ಅವಿನಾಶ್ ಈ ಕೊಲೆಗೂ, ನನಗೂ ಯಾವುದೇ ಸಂಬಂಧವಿಲ್ಲ ಎಂದು ಈ ಹಿಂದಿನ ತಮ್ಮ ವಿಚಾರಣೆಯಲ್ಲಿ ಹೇಳಿಕೆ ನೀಡಿದ್ದರು. ಇದಕ್ಕೂ ಮುನ್ನ ಅವಿನಾಶ್ ರೆಡ್ಡಿ ಅವರನ್ನು ಬಂಧಿಸುವಂತಿಲ್ಲ. ಆದರೆ, ಸಿಬಿಐ ವಿಚಾರಣೆಗೆ ಒಳಪಡಿಸಬಹುದು ಎಂದು ನ್ಯಾಯಾಲಯ ಹೇಳಿತ್ತು.