ರಾಯಗಡ್ (ಮಹಾರಾಷ್ಟ್ರ): ಭಾಷೆ ಸಂವಹನ ಮಾಧ್ಯಮ. ಭಾಷೆ ನಿರಂತರವಾಗಿ ಬೆಳೆಯುತ್ತದೆ ಮತ್ತು ವಿಕಸನಗೊಳ್ಳುತ್ತದೆ. ಕೆಲವೊಮ್ಮೆ, ಒಂದು ನಿರ್ದಿಷ್ಟ ಭಾಷೆಯ ಪದಗಳು ಇತರ ಭಾಷೆಗಳಲ್ಲಿಯೂ ಇರುತ್ತದೆ. ಅದು ಹೋಲಿಕೆಯನ್ನು ಪಡೆದುಕೊಳ್ಳುತ್ತದೆ. ನಂತರ ಹೊಸ ಭಾಷೆಯಾಗಿ ಪರಿವರ್ತನೆಗೊಳ್ಳುತ್ತದೆ.
ಇದೀಗ ಅದೇ ರೀತಿ ಮಹಾರಾಷ್ಟ್ರದ ಕೊರ್ಲೈ ನಿವಾಸಿಗಳದ್ದು. ಇಲ್ಲಿನ ಜನತೆ ಈಗಲೂ ಪೋರ್ಚುಗೀಸ್ ಭಾಷೆಯನ್ನು ಮಾತನಾಡುತ್ತಾರೆ. ಮರಾಠಿ ಭಾಷೆಯ ಮಿಶ್ರಣದೊಂದಿಗೆ ಪೋರ್ಚುಗೀಸ್ ಭಾಷೆ ಮಾತನಾಡುತ್ತಾರಂತೆ. ಈ ಹಳ್ಳಿಯಲ್ಲಿ, ಪೋರ್ಚುಗೀಸ್ ಜನಾಂಗದ ತಲೆಮಾರುಗಳು ಸುಮಾರು 700 ವರ್ಷಗಳಿಂದ ವಾಸಿಸುತ್ತಿವೆ. 250 ಕುಟುಂಬಗಳಿವೆ. ಈ ಕುಟುಂಬಗಳಲ್ಲಿನ ಹಿರಿಯ ನಾಗರಿಕರು ದೈನಂದಿನ ಸಂವಹನದಲ್ಲಿ ಪೋರ್ಚುಗೀಸ್ ಭಾಷೆಯನ್ನು ಮಾತ್ರ ಬಳಸುತ್ತಾರೆ. ಪೋರ್ಚುಗೀಸ್ ಆಡಳಿತಗಾರರು ಗ್ರಾಮವನ್ನು ತೊರೆದ ನಂತರವೂ ಅವರ ಭಾಷೆ ಮತ್ತು ಸಂಸ್ಕೃತಿಯನ್ನು ಈ ಕುಟುಂಬಗಳು ಜೀವಂತವಾಗಿರಿಸಿಕೊಂಡಿವೆ.
1498ರಲ್ಲಿ ವಾಸ್ಕೊ ಡಿ ಗಾಮಾ ಭಾರತದ ಕಲ್ಲಿಕೋಟೆಗೆ ಮೊದಲ ಬಾರಿ ಆಗಮಿಸಿದ. ಕೇರಳದ ನಂತರ ಗೋವಾ ಮತ್ತು ದಿಯು, ದಾಮನ್ನಲ್ಲಿ ತಮ್ಮ ಆಡಳಿತವನ್ನು ಸ್ಥಾಪಿಸಿದ. ನಂತರ ಪೋರ್ಚುಗೀಸರು ಕೊಂಕಣಕ್ಕೆ ಕಾಲಿಟ್ಟರು. ರೆವ್ಡಾಂಡಾ, ಚೌಲ್ ಮತ್ತು ಕೊರ್ಲೈನಲ್ಲಿ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿದರು. 1505ರಲ್ಲಿ, ಅವರು ಚೌಲ್‌ಗೆ ಪ್ರವೇಶಿಸಿದರು. ಆ ಸಮಯದಲ್ಲಿ, ಪೋರ್ಚುಗೀಸ್ ಮತ್ತು ನಿಜಾಮನ ನಡುವಿನ ಯುದ್ಧಗಳು ಸಾಮಾನ್ಯವಾಗಿತ್ತು. ಬುರ್ಹಾನ್ ನಿಜಾಮನ ಮರಣದ ನಂತರ ಕೊರ್ಲೈ ಕೋಟೆಯನ್ನು ಎರಡನೆಯ ನಿಜಾಮ ನಿರ್ಮಿಸಿದ. ಆದರೆ, ಇದನ್ನು 1594ರಲ್ಲಿ ಪೋರ್ಚುಗೀಸರು ಗೆದ್ದರು ಮತ್ತು ಅವರ ಸಾಮ್ರಾಜ್ಯವನ್ನು ಅಲ್ಲಿ ಸ್ಥಾಪಿಸಲಾಯಿತು.
ಕೊರ್ಲೈನಲ್ಲಿ ಪೋರ್ಚುಗೀಸ್ ಕುಟುಂಬಗಳು ಇನ್ನೂ ಅಸ್ತಿತ್ವದಲ್ಲಿವೆ. ಹೊಸ ಪೋರ್ಚುಗೀಸ್ ಆಡಳಿತಗಾರರು ಮೊದಲು ಸ್ಥಳೀಯ ಮರಾಠಿ ಜನರನ್ನು ತಮ್ಮ ಗುಲಾಮರನ್ನಾಗಿ ಮಾಡಿಕೊಂಡರು. ಆದರೆ, ಅವರೊಂದಿಗೆ ಸಂವಹನ ನಡೆಸಲು ಭಾಷೆಯ ಅವಶ್ಯಕತೆ ಹುಟ್ಟಿಕೊಂಡಿತು. ಅದರಿಂದ ಹೊಸ ಭಾಷೆ ಹೊರಹೊಮ್ಮಿತು. ಇದನ್ನು ಕ್ರಿಯೋಲ್ ಎಂದು ಕರೆಯಲಾಗುತ್ತದೆ. ಪೋರ್ಚುಗೀಸ್ ಮತ್ತು ಮರಾಠಾ ಆಡಳಿತಗಾರರ ನಡುವೆ ನಡೆದ ಶಾಂತಿ ಒಪ್ಪಂದದ ನಂತರ, ಪೋರ್ಚುಗೀಸರು ತಾಯ್ನಾಡಿಗೆ ಮರಳಿದರು. ಇನ್ನೂ, ಕೊರ್ಲೈನಲ್ಲಿ ಅವರ ಭಾಷೆ ಚಾಲ್ತಿಯಲ್ಲಿದೆ. ಪೋರ್ಚುಗೀಸ್ ಜನಾಂಗದ ಕೆಲವು ಕುಟುಂಬಗಳಾದ ವೆಗಾಸ್, ಮಾರ್ಟಿಸ್, ದೇಸೋಜಾ, ರುಜ್ರಿಯಾ, ಪರೇರಾ, ಪೆನಾ ರೋಚ್, ಗೋಮ್ಸ್ ಮತ್ತು ಫೆರ್ನಾಂಡಿಸ್ ಇಂದು ಇಲ್ಲಿ ವಾಸಿಸುತ್ತಿದ್ದಾರೆ.
ಕೊರ್ಲೈ ಪ್ರದೇಶವು ರೋಮನ್ ಕ್ಯಾಥೊಲಿಕರು, ಹಿಂದೂಗಳು ಮತ್ತು ಮುಸ್ಲಿಮರ ನೆಲೆಯಾಗಿದೆ. ಮುಖ್ಯವಾಗಿ ರೋಮನ್ ಕ್ಯಾಥೊಲಿಕ್ ಜನರು ಕ್ರಿಯೋಲ್ ಭಾಷೆ ಎಂದು ಕರೆಯಲ್ಪಡುವ ಪೋರ್ಚುಗೀಸ್ ಭಾಷೆಯನ್ನು ಮಾತನಾಡುತ್ತಾರೆ. ಸ್ಥಳೀಯ ಜನರು ಇದನ್ನು ನೌ ಲಿನಾಗ್ ಭಾಷೆ ಎಂದು ಕರೆಯುತ್ತಾರೆ. ಇದು ಮರಾಠಿ ಮತ್ತು ಪೋರ್ಚುಗೀಸ್ ಭಾಷೆಗಳ ಮಿಶ್ರಣದಿಂದ ಹುಟ್ಟಿಕೊಂಡಿದೆ. ಇಲ್ಲಿನ ಹಿರಿಯರು ಈ ಭಾಷೆಯನ್ನು ಬಳಸುತ್ತಾರೆ ಮತ್ತು ಹೊಸ ತಲೆಮಾರಿನವರು ಇದನ್ನು ಮಾತನಾಡುತ್ತಿದ್ದರೂ, ಅವರ ಉಚ್ಚಾರಣೆಗಳು ಎರಡು ಭಾಷೆಗಳ ಮಿಶ್ರಣವನ್ನು ಒಳಗೊಂಡಿರುತ್ತವೆ. ಆದರೆ ಹಳ್ಳಿಯ ರೋಮನ್ ಕ್ಯಾಥೊಲಿಕರು ಪೋರ್ಚುಗೀಸ್ ಭಾಷೆ ಮತ್ತು ಸಂಸ್ಕೃತಿಯನ್ನು ಸಂರಕ್ಷಿಸಿದ್ದಾರೆ ಎಂದು ಹೇಳಬಹುದು.