ತಿರುವನಂತಪುರಂ(ಕೇರಳ): ಅತ್ಯಾಚಾರ ಆರೋಪ ಹೊತ್ತಿರುವ ನಟ, ನಿರ್ಮಾಪಕ ವಿಜಯ್ ಬಾಬು ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಕಾರಣಕ್ಕಾಗಿ ನಟಿ ಮಾಲಾ ಪಾರ್ವತಿ ಅವರು ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ (ಅಮ್ಮ) ಆಂತರಿಕ ದೂರು ಸಮಿತಿಗೆ ರಾಜೀನಾಮೆ ನೀಡಿದ್ದಾರೆ.
ಅತ್ಯಾಚಾರ ಆರೋಪ ಹೊತ್ತಿರುವ ಬಾಬು ವಿರುದ್ಧ ಐಸಿಸಿ (ಆಂತರಿಕ ದೂರು ಸಮಿತಿ) ಕ್ರಮಕ್ಕೆ ಶಿಫಾರಸು ಮಾಡಿದೆ. ಆದರೆ, ಮಲಯಾಳಂ ಚಲನಚಿತ್ರ ಕಲಾವಿದರ ಸಂಘ ಯಾವುದೇ ಕ್ರಮಕ್ಕೆ ಮುಂದಾಗದೇ ಹೇಳಿಕೆಯನ್ನು ನೀಡಿದೆ. ಹೇಳಿಕೆಯು ಶಿಸ್ತಿನ ಕ್ರಮವಲ್ಲ. ಐಸಿಸಿ ಸದಸ್ಯಳಾಗಿ ನಾನು ಅದನ್ನು ಸ್ವೀಕರಿಸಲು ಸಾಧ್ಯವಿಲ್ಲ. ಹಾಗಾಗಿ ನಾನು ಐಸಿಸಿಗೆ ರಾಜೀನಾಮೆ ನೀಡಿದ್ದೇನೆ ಎಂದು ನಟಿ ಮಾಲಾ ಪಾರ್ವತಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಘಟನೆಯ ಬಳಿಕ ನಿರ್ಮಾಪಕ ವಿಜಯ್ ಬಾಬು ಸಂಸ್ಥೆಗೆ ಕಳಂಕ ತರಲು ಬಯಸದ ಕಾರಣ ತನ್ನ ವಿರುದ್ಧದ ಆರೋಪಗಳ ಹಿನ್ನೆಲೆಯಲ್ಲಿ ಕಾರ್ಯಕಾರಿ ಸಮಿತಿಯಿಂದ ದೂರವಿರಲು ಬಯಸುವುದಾಗಿ ಸಂಸ್ಥೆಗೆ ಪತ್ರ ಬರೆದಿದ್ದಾನೆ. ಇದನ್ನು ಸಮಿತಿಯೂ ಅಂಗೀಕರಿಸಿದೆ. ವಿಜಯ್ ಬಾಬು ಅವರ ಪ್ರೊಡಕ್ಷನ್ ಹೌಸ್ ನಿರ್ಮಿಸಿದ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ನಟಿ ಏಪ್ರಿಲ್ 22 ರಂದು ನಿರ್ಮಾಪಕ ವಿಜಯ್ ತನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಲ್ಲದೇ ದೈಹಿಕವಾಗಿ ಹಲ್ಲೆ ಮಾಡಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದರು.