ಬೆಂಗಳೂರು: ಖೇಲೋ ಇಂಡಿಯಾ ಅಂತರ್ ವಿಶ್ವವಿದ್ಯಾಲಯ ಕ್ರೀಡಾಕೂಟ - 2021ಕ್ಕೆ ಇಲ್ಲಿನ ಕಂಠೀರವ ಸ್ಟೇಡಿಯಂನಲ್ಲಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅಧಿಕೃತವಾಗಿ ಚಾಲನೆ ನೀಡಿದರು. ವಿಶೇಷವೆಂದರೆ, ಇದೇ ಮೊದಲ ಬಾರಿಗೆ ದೇಶಿ ಕ್ರೀಡೆ ಮಲ್ಲಗಂಬಕ್ಕೆ ಖೇಲೋ ಇಂಡಿಯಾದಲ್ಲಿ ಅವಕಾಶ ನೀಡಲಾಗಿದೆ. ಬಣ್ಣಬಣ್ಣದ ದೀಪಗಳಿಂದ ಕಂಗೊಳಿಸುತ್ತಿದ್ದ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಮೈನವಿರೇಳಿಸುವ ಮಲ್ಲಕಂಬ ಪ್ರದರ್ಶನ ವೀಕ್ಷಕರ ಮನ ಸೆಳೆಯಿತು.
ಜೀವನದಲ್ಲಿ ಮುಂದೆ ಬರಲು ಕ್ರೀಡೆ ಸಹಕಾರ ನೀಡುತ್ತದೆ. ಕ್ರೀಡೆ ಮತ್ತು ಜೀವನ ಎರಡು ಅತ್ಯಂತ ಮಹತ್ವದ ವಿಚಾರಗಳು. ಜೀವನದ ಪ್ರಗತಿಯ ಪ್ರಮುಖ ಅಂಗ ಕ್ರೀಡೆ. ಏಕ್ ಭಾರತ್ ಶ್ರೇಷ್ಠ ಭಾರತ್ ಪರಿಕಲ್ಪನೆ ನಮ್ಮದು. ಇದೀಗ ಫಿಟ್ ನೆಸ್ ದೇಶದ ಮಂತ್ರ ಆಗಿದೆ. ಎನ್.ಇ.ಪಿ ಯಲ್ಲಿ ಕ್ರೀಡೆಗೆ ಆದ್ಯತೆ ನೀಡಲಾಗಿದೆ. ಕ್ರೀಡೆಯ ಪವರ್ ದೇಶದ ಪವರ್ ಎಂದು ಪ್ರಧಾನಿ ಮೋದಿ ವಿಡಿಯೋ ಸಂದೇಶದಲ್ಲಿ ಹೇಳಿದರು.
ಕ್ರೀಡೆಯಲ್ಲಿ ಟೀಂ ಸ್ಪಿರಿಟ್ ಇರಬೇಕು. ಖೇಲೋ ಇಂಡಿಯಾ ಮೂಲಕ ದೇಶವನ್ನು ಪ್ರತಿನಿಧಿಸುವ ಅವಕಾಶ ಕ್ರೀಡಾಪಟುಗಳಿಗೆ ಸಿಗಲಿದೆ. ಒಲಿಂಪಿಕ್ ಕ್ರೀಡೆಯಲ್ಲಿ ಪದಕ ಗೆದ್ದವರಿಗೆ ದೇಶ ಗೆದ್ದ ಖುಷಿ ಇತ್ತು. ಈ ಹಿನ್ನೆಲೆಯಲ್ಲಿ ಖೇಲೋ ಇಂಡಿಯಾ ಉತ್ತಮ ಕ್ರೀಡಾಪಟುಗಳು ಆಗಲು ಸಹಕಾರ ನೀಡಲಿದೆ ಎಂದು ಎಲ್ಲ ಕ್ರೀಡಾಪಟುಗಳಿಗೆ ಪ್ರಧಾನಿ ಮೋದಿ ಶುಭಾಶಯ ಕೋರಿದರು.
ಕನ್ನಡದಲ್ಲಿ ಸ್ವಾಗತಿಸಿದ ಉಪ ರಾಷ್ಟ್ರಪತಿ: ಕನ್ನಡದಲ್ಲಿ ಭಾಷಣ ಪ್ರಾರಂಭ ಮಾಡಿದ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು. ಗಣ್ಯರನ್ನ ಕನ್ನಡದಲ್ಲಿಯೇ ಸ್ವಾಗತಿಸಿದರು. ಭಾರತ ಇವತ್ತು ವಿಶ್ವದ ಗಮನ ಸೆಳೆದಿದೆ. ಖೇಲೋ ಇಂಡಿಯಾ ಕ್ರೀಡಾಕೂಟವನ್ನ ಕ್ರೀಡಾಪಟುಗಳು ಸದುಪಯೋಗಪಡಿಸಿಕೊಳ್ಳಬೇಕು. ಕ್ರೀಡೆ ಜೀವನ ಶೈಲಿ ಬದಲಿಸುತ್ತದೆ. ಕರ್ನಾಟಕ ರಾಜ್ಯ ಸರ್ಕಾರವು ಅದ್ಭುತವಾಗಿ ಕ್ರೀಡಾಕೂಟ ಆಯೋಜಿಸಿದೆ ಎಂದು ಶ್ಲಾಘಿಸಿದರು.
ಕ್ರೀಡಾಪಟುಗಳಿಗೆ ಬೆಸ್ಟ್ ಫುಡ್ ಚಿಕನ್ 65 ಅಲ್ಲ ಅದು ರಾಗಿಮುದ್ದೆ ಎಂದು ಕ್ರೀಡಾಪಟುಗಳಿಗೆ ರಾಗಿ ಮುದ್ದೆ ತಿನ್ನುವಂತೆ ಸಲಹೆ ನೀಡಿದರು. ಯುವಕರು ಕ್ರೀಡೆಯನ್ನು ಜೀವನದ ಭಾಗವಾಗಿ ಸ್ವೀಕಾರ ಮಾಡಬೇಕು. ದೈಹಿಕವಾಗಿ ಬಲಿಷ್ಠರಾಗಬೇಕು. ದೇಶದ ಎಲ್ಲಾ ವಿವಿಗಳು ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡಲು ಕ್ರಮವಹಿಸಬೇಕು. ಖೇಲೋ ಇಂಡಿಯಾದಲ್ಲಿ ಸಾಂಪ್ರದಾಯಿಕ, ಗ್ರಾಮೀಣ ಕ್ರೀಡೆ ಸೇರಿಸಲಾಗಿದೆ ಎಂದು ಹೇಳಿದರು.

ನಿತ್ಯ ಬ್ಯಾಡ್ಮಿಂಟನ್ ಆಟ: ನನಗೆ 73 ವರ್ಷ, ಆದರೂ ದಿನ ನಿತ್ಯ ಫಿಟ್ ಆಗಿ ಇರಲು ನಾನು ಬ್ಯಾಡ್ಮಿಂಟನ್ ಆಡುತ್ತೇನೆ. ಚಿಕ್ಕವರು ಇದ್ದಾಗ ಕಬಡ್ಡಿ, ಖೋಖೋ ಸೇರಿದಂತೆ ಹಲವು ಕ್ರೀಡೆಗಳನ್ನ ಆಡಿದ್ದೇನೆ ಎಂದರು.
ಹೊಸ ಮನ್ವಂತರದ ದಿನ: ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ ಕ್ರೀಡಾ ಇತಿಹಾಸದಲ್ಲಿ ಇಂದು ಹೊಸ ಮನ್ವಂತರದ ದಿನ. ಬೇರೆ ರಾಜ್ಯಕ್ಕೆ ಹೋಲಿಸಿದರೆ ನಮ್ಮಲ್ಲಿ ಬಹಳಷ್ಟು ವಿಭಿನ್ನವಾಗಿರುವ ಸಂಸ್ಕೃತಿ ಇದೆ. ಬೆಂಗಳೂರು ಇಡೀ ಭಾರತದಲ್ಲಿ ಪ್ರಗತಿ ಪಡೆದಿರುವ ರಾಜಧಾನಿ. ಎಲ್ಲ ರೀತಿಯ ಸೌಲಭ್ಯ ಸೌಕರ್ಯ ಇದೆ. ಸಿಲಿಕಾನ್ ವ್ಯಾಲಿ ಎಂದು ಕರೆಯಲ್ಪಡುವ ಬೆಂಗಳೂರಲ್ಲಿ ಇಂದು ಕ್ರೀಡಾಕೂಡ ಆಗುತ್ತಿರುವುದಕ್ಕೆ ಹೆಮ್ಮೆಯಿದೆ ಎಂದರು.
ಸುಮಾರು 3800 ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ. ಜೈನ್ ಯೂನಿವರ್ಸಿಟಿ ಸಹಭಾಗತ್ವದಲ್ಲಿ ಕ್ರೀಡಾ ಕೂಟ ನಡೆಯುತ್ತಿದೆ. ಸೋಲು-ಗೆಲುವು ಸಾಮಾನ್ಯ. ಗೆಲುವಿಗಾಗಿ ಆಡಿ, ಸೋಲಿಲ್ಲದ ಹಾಗೆ ಆಡಿ, ಸೋತಾಗ ಬೇಸರಿಸಿಕೊಳ್ಳಬೇಡಿ. ಮುಂದಿನ ದಿನ ಮತ್ತೊಂದು ಅವಕಾಶ ಇದ್ದೆ ಇರುತ್ತದೆ. ಪ್ರತಿಯೊಬ್ಬರಿಗೂ ಒಳ್ಳೆಯದು ಆಗಲಿ ಎಂದು ಕ್ರೀಡಾಕೂಟದಲ್ಲಿ ಭಾಗವಹಿಸಿದ ಎಲ್ಲರಿಗೂ ಸಿಎಂ ಶುಭ ಹಾರೈಸಿದರು.

ಸಾಂಸ್ಕೃತಿಕ ಕಾರ್ಯಕ್ರಮ: ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕದ ಸಾಂಸ್ಕೃತಿಕ ಕಲೆಗಳನ್ನು ಪ್ರದರ್ಶಿಸಲಾಯಿತು. ಉದ್ಘಾಟನಾ ಕಾರ್ಯಕ್ರಮದಲ್ಲಿ ಅಂದಾಜು 500 ರಿಂದ 600 ಮಂದಿ ಪಾಲ್ಗೊಂಡಿದ್ದರು. ದೇಶದ 190ಕ್ಕೂ ಹೆಚ್ಚು ವಿಶ್ವ ವಿದ್ಯಾಲಯಗಳು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿವೆ.
ಮಲ್ಲಕಂಬ ಕ್ರೀಡೆಗೆ ಮೊದಲ ಅವಕಾಶ: ಖೇಲೋ ಇಂಡಿಯಾ ಗೇಮ್ಸ್ನಲ್ಲಿ ಇದೇ ಮೊದಲ ಬಾರಿಗೆ ಮಲ್ಲಕಂಬಕ್ಕೆ ಅವಕಾಶ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಸಿಎಂ ಎದುರು ವಿದ್ಯಾರ್ಥಿಗಳು ಮಲ್ಲಕಂಬ ಪ್ರದರ್ಶನ ನೀಡಿದರು. ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಕ್ರೀಡಾ ಇಲಾಖೆ ಸಚಿವ ಅನುರಾಗ್ ಸಿಂಗ್ ಠಾಕೂರ್, ರಾಜ್ಯ ಕ್ರೀಡಾ ಸಚಿವ ಕೆ.ಸಿ.ನಾರಯಣ ಗೌಡ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸೇರಿದಂತೆ ಕ್ರೀಡಾ ಕ್ಷೇತ್ರದ ಗಣ್ಯರು ಹಾಗೂ ಕ್ರೀಡಾಪಟುಗಳು ಭಾಗಿಯಾಗಿದ್ದರು.