ಮುಂಬೈ (ಮಹಾರಾಷ್ಟ್ರ): ಭಾರತೀಯ ರೈಲ್ವೆ ದೇಶದ ಜನತೆಯ ಸಂಚಾರ ನಾಡಿಯಾಗಿದೆ. ಅಗ್ಗ ದರ ಮತ್ತು ಸುಲಭ ಲಭ್ಯತೆಯ ಕಾರಣಕ್ಕೆ ಬಹುಪಾಲು ಪ್ರಯಾಣಿಕರು ರೈಲು ಪ್ರಯಾಣ ಅವಲಂಬಿಸಿದ್ದಾರೆ. ಇತ್ತೀಚೆಗೆ ಆರಂಭವಾದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಯಶಸ್ವಿ ಸಂಚಾರ ನಡೆಸುತ್ತಿದೆ. ಸಂಪೂರ್ಣ ಸ್ವದೇಶಿ ನಿರ್ಮಿತ ರೈಲು ಅಲ್ಪಾವಧಿಯಲ್ಲಿಯೇ ಸಾಕಷ್ಟು ಪ್ರಯಾಣಿಕರ ಮೆಚ್ಚುಗೆ ಗಿಟ್ಟಿಸಿದೆ. ಇದೀಗ ವಂದೇ ಭಾರತ್ ಎಕ್ಸ್‌ಪ್ರೆಸ್ ಮಾದರಿಯಲ್ಲೇ ವಂದೇ ಮೆಟ್ರೋ ಆರಂಭಿಸಲು ರೈಲ್ವೆ ಇಲಾಖೆ ಸಜ್ಜಾಗಿದೆ.
ಇದನ್ನೂ ಓದಿ: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೊದಲ ಮಹಿಳಾ ಲೋಕೋ ಪೈಲಟ್ ಸುರೇಖಾ ಯಾದವ್
ವಂದೇ ಭಾರತ್ ರೈಲನ್ನು ದೂರ ಪ್ರಯಾಣ ಮತ್ತು ದೊಡ್ಡ-ದೊಡ್ಡ ನಗರಗಳ ಮಧ್ಯೆ ಆರಂಭಿಸಲಾಗಿದೆ. ಪ್ರಸ್ತುತ ದೇಶದಲ್ಲಿ 18 ವಂದೇ ಭಾರತ್ ರೈಲುಗಳು ಓಡುತ್ತಿವೆ. ಈ ರೈಲು ಯಶಸ್ವಿಯಾದ ಬೆನ್ನಲ್ಲೇ ಶೀಘ್ರದಲ್ಲೇ ದೊಡ್ಡ ನಗರಗಳಲ್ಲಿ ವಂದೇ ಮೆಟ್ರೋವನ್ನು ಪ್ರಾರಂಭಿಸಲಾಗುವುದು ಎಂದು ಕೇಂದ್ರ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಶಿವರಾಜ್ ಮನಸ್ಪುರೆ ತಿಳಿಸಿದ್ದಾರೆ.
ವಂದೇ ಮೆಟ್ರೋ ನಗರದೊಳಗಿನ ಪ್ರಯಾಣಕ್ಕೆ ಉಪಯುಕ್ತ. ಇದು ಎಸಿ ಲೋಕಲ್ನಂತೆ ಸಂಪೂರ್ಣ ಹವಾನಿಯಂತ್ರಿತವಾಗಿರಲಿದೆ. ಮುಂಬೈ ರೈಲ್ವೆ ವಿಕಾಸ್ ಕಾರ್ಪೊರೇಷನ್ (ಎಂಆರ್ವಿಸಿ), ರೈಲ್ವೆ ಸಚಿವಾಲಯ ಮತ್ತು ಮಹಾರಾಷ್ಟ್ರ ಸರ್ಕಾರದ ಅಡಿಯಲ್ಲಿ ಮುಂಬೈನಲ್ಲಿ ಮೊದಲ ವಂದೇ ಮೆಟ್ರೋ ಪ್ರಾರಂಭವಾಗಲಿದೆ ಎಂದು ಪಿಆರ್ಒ ಶಿವರಾಜ್ ಮನಸ್ಪುರೆ ಮಾಹಿತಿ ನೀಡಿದರು. ಅಲ್ಲದೇ, ಶೀಘ್ರದಲ್ಲೇ ಮುಂಬೈ, ದೆಹಲಿ, ಕೋಲ್ಕತ್ತಾ ನಗರಗಳಲ್ಲೂ ವಂದೇ ಮೆಟ್ರೋ ಸಂಚರಿಸಲಿದೆ ಎಂದರು.
ಇದನ್ನೂ ಓದಿ: ಮುಂಬೈ - ಪುಣೆ ಮಾರ್ಗವಾಗಿ ಸಂಚರಿಸದ ವಂದೇ ಭಾರತ್ ರೈಲು
ಕೆಲವು ದಿನಗಳ ಹಿಂದೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ವಂದೇ ಮೆಟ್ರೋ ಬಗ್ಗೆ ಮಾಹಿತಿ ನೀಡಿದ್ದರು. ದೇಶದಲ್ಲಿ ವಂದೇ ಭಾರತ್ ರೈಲು ಯಶಸ್ವಿಯಾದ ನಂತರ ಕೇಂದ್ರ ಸರ್ಕಾರ ವಂದೇ ಭಾರತ್ ಮೆಟ್ರೋ ರೈಲು ಆರಂಭಿಸಲು ಹೊರಟಿದೆ ಎಂದು ತಿಳಿಸಿದ್ದರು. ಇದರ ಮಾಹಿತಿ ಕೇಂದ್ರ ರೈಲ್ವೆಯ ಟ್ವಿಟರ್ ಖಾತೆಯಲ್ಲೂ ಹಂಚಿಕೊಳ್ಳಲಾಗಿತ್ತು. ಇದೀಗ ಮುಂಬೈ ನಗರದಲ್ಲಿ ವಂದೇ ಮೆಟ್ರೋ ಯಾವಾಗ ಓಡಲಿದೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿಸಿದೆ.
ಮತ್ತೊಂದೆಡೆ, ವಂದೇ ಮೆಟ್ರೋದಲ್ಲಿ ಹೈಡ್ರೋಜನ್ ಅನ್ನು ಇಂಧನವಾಗಿ ಬಳಸಲಾಗುತ್ತದೆ. ಈ ಮೆಟ್ರೋ ಸಹ ಸಂಪೂರ್ಣ ಸ್ವದೇಶಿ ನಿರ್ಮಿತವಾಗಿದೆ. ಇದರ ವೇಗ ಗಂಟೆಗೆ 160 ಕಿಲೋಮೀಟರ್ ಆಗಿರುತ್ತದೆ. ಈ ವರ್ಷಾಂತ್ಯದೊಳಗೆ ವಂದೇ ಮೆಟ್ರೋ ಆರಂಭವಾಗುವ ನಿರೀಕ್ಷೆ ಇದೆ. 2024ರ ಲೋಕಸಭೆ ಚುನಾವಣೆಗೂ ಮುನ್ನವೇ ಮೋದಿ ಸರ್ಕಾರ ವಂದೇ ಮೆಟ್ರೋವನ್ನು ಉದ್ಘಾಟಿಸಿ ದೇಶದ ಪ್ರಮುಖ ಮಹಾನಗರದಲ್ಲೂ ಓಡಿಸಲು ಯೋಜಿಸಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಜುಲೈನಲ್ಲಿ ಬೆಂಗಳೂರು-ಧಾರವಾಡ ವಂದೇ ಭಾರತ್ ರೈಲಿಗೆ ಚಾಲನೆ: ರೈಲ್ವೆ ಸಚಿವರ ಭೇಟಿಯಾದ ಜೋಶಿ