ನವದೆಹಲಿ: ದೇಶದಲ್ಲಿ ಇಂದಿನಿಂದ 18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ವ್ಯಾಕ್ಸಿನ್ ನೀಡುವ ಅಭಿಯಾನಕ್ಕೆ ಚಾಲನೆ ಸಿಕ್ಕಿದೆ. ಆದರೆ, ಲಸಿಕೆಯ ಕೊರತೆಯಿಂದಾಗಿ ಅನೇಕ ರಾಜ್ಯಗಳಲ್ಲಿ ವ್ಯಾಕ್ಸಿನೇಷನ್ ಕಾರ್ಯಕ್ರಮ ಪ್ರಾರಂಭಗೊಂಡಿಲ್ಲ. ಸೋಮವಾರದಿಂದ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡುವುದಾಗಿ ಕೇಜ್ರಿವಾಲ್ ಘೋಷಣೆ ಮಾಡಿದ್ದಾರೆ.
ಕೇಂದ್ರ ಸರ್ಕಾರ ಅನೇಕ ರಾಜ್ಯಗಳಿಗೆ ವ್ಯಾಕ್ಸಿನ್ ರಿಲೀಸ್ ಮಾಡಿರುವ ಕಾರಣ ಈ ಅಭಿಯಾನಕ್ಕೆ ಸೋಮವಾರದಿಂದ ಚಾಲನೆ ಸಿಗುವ ಸಾಧ್ಯತೆ ಇದೆ. ಇದೀಗ ತಮಗೆ 4.5 ಲಕ್ಷ ಕೋವಿಡ್ ಡೋಸ್ ಲಭ್ಯವಾಗಿದ್ದು, ಸೋಮವಾರದಿಂದ 18 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನ್ ನೀಡಲಾಗುವುದು ಎಂದು ದೆಹಲಿ ಸಿಎಂ ಕೇಜ್ರಿವಾಲ್ ತಿಳಿಸಿದ್ದಾರೆ.
ಇದನ್ನೂ ಓದಿ: ದೆಹಲಿಯಲ್ಲಿ ಇನ್ನೂ ಒಂದು ವಾರ ಲಾಕ್ಡೌನ್ ವಿಸ್ತರಣೆ: ಕೇಜ್ರಿವಾಲ್ ಘೋಷಣೆ
ಕೋವಿಡ್ ಲಸಿಕೆ ಕೊರತೆಯಿಂದಾಗಿ ದೆಹಲಿ, ಮಹಾರಾಷ್ಟ್ರ, ತಮಿಳುನಾಡು, ಮಧ್ಯಪ್ರದೇಶ, ಕರ್ನಾಟಕ, ಪಶ್ಚಿಮ ಬಂಗಾಳ, ರಾಜಸ್ಥಾನ, ಜಾರ್ಖಂಡ್ ಹಾಗೂ ಪಂಜಾಬ್ನಲ್ಲಿ ಈ ಅಭಿಯಾನಕ್ಕೆ ಚಾಲನೆ ಸಿಕ್ಕರೂ ಲಸಿಕೆ ಲಭ್ಯವಾಗುತ್ತಿಲ್ಲ. ಹೀಗಾಗಿ 18 ವರ್ಷ ಮೇಲ್ಟಟ್ಟವರಿಗೆ ವ್ಯಾಕ್ಸಿನೇಷನ್ ನೀಡುವ ಕಾರ್ಯ ವಿಳಂಬವಾಗುವ ಸಾಧ್ಯತೆ ದಟ್ಟವಾಗಿದೆ.
ದೆಹಲಿಯಲ್ಲಿ ನಿತ್ಯ ಕೋವಿಡ್ ಸೋಂಕಿತ ಪ್ರಕರಣ ಹೆಚ್ಚಾಗಿ ಕಂಡು ಬರುತ್ತಿರುವ ಕಾರಣ ಇದೀಗ ಮತ್ತೊಂದು ವಾರ ಲಾಕ್ಡೌನ್ ಘೋಷಣೆ ಮಾಡಲಾಗಿದ್ದು, ಕೇಜ್ರಿವಾಲ್ ಇದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.