ರೂರ್ಕಿ (ಉತ್ತರಾಖಂಡ): ಉತ್ತರಾಖಂಡದ ಹರಿದ್ವಾರ ಜಿಲ್ಲೆಯ ಗ್ರಾಮವೊಂದರಲ್ಲಿ ಇಂದು ಮಹಾ ಶಿವರಾತ್ರಿಯ ಪ್ರಯುಕ್ತ ನಡೆಸಲು ಉದ್ದೇಶಿಸಿದ್ದ ಮೆರವಣಿಗೆಗೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ. ಇದರಿಂದ ಆಕ್ರೋಶಗೊಂಡಿರುವ ಗ್ರಾಮಸ್ಥರು ಧರಣಿ ನಡೆಸಿದ್ದಾರೆ. ಅಲ್ಲದೇ, ಕೆಲ ಗ್ರಾಮಸ್ಥರು ಮನೆ ಹೊರಗೆ ತಮ್ಮ ಮನೆಗಳು ಮಾರಾಟಕ್ಕಿದೆ ಎಂಬ ಪೋಸ್ಟರ್ಗಳು ಅಂಟಿಸಿ ಸಿಟ್ಟು ಹೊರಹಾಕಿದ್ದಾರೆ.
ಹರಿದ್ವಾರದ ಭಗವಾನ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯ ದಾದಾ ಜಲಾಲ್‌ಪುರ ಗ್ರಾಮದಲ್ಲಿ ಈ ಬಾರಿ ಮಹಾ ಶಿವರಾತ್ರಿಯಂದು ಮೆರವಣಿಗೆ ನಡೆಸಲು ಗ್ರಾಮಸ್ಥರು ಆಡಳಿತದಿಂದ ಅನುಮತಿ ಕೇಳಿದ್ದರು. ಆದರೆ, ಕಳೆದ ವರ್ಷ ಎಪ್ರಿಲ್‌ನಲ್ಲಿ ಗ್ರಾಮದಲ್ಲಿ ಹನುಮ ಜಯಂತಿಯಂದು ಎರಡು ಗುಂಪುಗಳ ನಡುವೆ ಗಲಾಟೆ ನಡೆದಿತ್ತು. ಇದನ್ನು ನಿಯಂತ್ರಿಸಲು ಪೊಲೀಸರು ಮತ್ತು ಅಧಿಕಾರಿಗಳು ಸಾಕಷ್ಟು ಹರಸಾಹಸ ಪಡಬೇಕಾಗಿತ್ತು.
ಈ ಹಿನ್ನೆಲೆಯಲ್ಲಿ ಮಹಾ ಶಿವರಾತ್ರಿಯಂದು ಮೆರವಣಿಗೆ ನಡೆಸಲು ಸ್ಥಳೀಯ ಆಡಳಿತ ಅನುಮತಿ ನೀಡಿರಲಿಲ್ಲ. ಅಲ್ಲದೇ, ಗ್ರಾಮಸ್ಥರೊಂದಿಗೆ ಅಧಿಕಾರಿಗಳು ಸಭೆ ನಡೆಸಿ, ಮನವರಿಕೆ ಮಾಡಿಕೊಟ್ಟು ಮೆರವಣಿಗೆ ನಡೆಸಿದಂತೆ ಮನವಿ ಮಾಡಿದ್ದರು. ಆದರೂ, ಗ್ರಾಮಸ್ಥರು ತಮ್ಮ ಪಟ್ಟು ಸಡಿಸಲಿಸದೇ ಮೆರವಣಿಗೆ ನಡೆಸಲು ಸಜ್ಜಾಗಿದ್ದರು. ಹೀಗಾಗಿ ಜಿಲ್ಲಾಡಳಿತವು ಶುಕ್ರವಾರ ತಡ ರಾತ್ರಿಯಿಂದಲೇ ನಿಷೇಧಾಜ್ಞೆ ಜಾರಿಗೊಳಿಸಿದೆ.
ಗ್ರಾಮದ 5 ಕಿಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ: ಮಹಾ ಶಿವರಾತ್ರಿಯ ಪ್ರಯುಕ್ತ ಮೆರವಣಿಗೆಗೂ ನಿರ್ಬಂಧ ಹೇರಿರುವ ಜಿಲ್ಲಾಡಳಿತ, ಶುಕ್ರವಾರ ತಡ ರಾತ್ರಿಯಿಂದ ಶನಿವಾರ ರಾತ್ರಿ 9 ಗಂಟೆಯವರೆಗೆ ಸೆಕ್ಷನ್ 144ರಡಿ ನಿಷೇಧಾಜ್ಞೆ ವಿಧಿಸಿದೆ. ಜಲಾಲ್‌ಪುರ ಗ್ರಾಮದ 5 ಕಿಲೋಮೀಟರ್ ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ.
ಜೊತೆಗೆ ಯಾವುದೇ ರೀತಿಯ ಆಯುಧವನ್ನು ಹೊಂದುವುದನ್ನು ಸಹ ನಿಷೇಧಿಸಲಾಗಿದೆ. ಇದೇ ವೇಳೆ ಸಮಾಜದ ಪರಿಸರ ಹಾಳು ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಆಡಳಿತ ಸ್ಪಷ್ಟವಾಗಿ ಎಚ್ಚರಿಸಿದೆ. ಆದರೆ, ಜಿಲ್ಲಾಡಳಿತದ ಈ ನಡೆಗೆ ಗ್ರಾಮಸ್ಥರಿಂದ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ. ಗ್ರಾಮದಲ್ಲಿ ಸಾಕಷ್ಟು ಜನರು ಜಮಾಯಿಸಿ ಧರಣಿ ಕುಳಿತಿದ್ದಾರೆ.
ಮನೆಗಳು ಮಾರಾಟದ ಪೋಸ್ಟರ್ ಬಿಸಿ: ಧರಣಿ ಕುಳಿತಿರುವ ಗ್ರಾಮಸ್ಥರ ಮನವೊಲಿಸಲು ಪೊಲೀಸರು ಹಾಗೂ ಜಂಟಿ ಮ್ಯಾಜಿಸ್ಟ್ರೇಟ್ ಸಾಕಷ್ಟು ಪ್ರಯತ್ನ ನಡೆಸುತ್ತಿದ್ದಾರೆ. ಆದರೆ, ಧರಣಿ ಮತ್ತು ತಮ್ಮ ಪಟ್ಟು ಬಿಡಲು ಗ್ರಾಮಸ್ಥರು ನಿರಾಕರಿಸಿದ್ದು, ಸ್ಥಳದಲ್ಲೇ ಕುಳಿತಿದ್ದಾರೆ. ಮತ್ತೊಂದೆಡೆ, ಜಿಲ್ಲಾಡಳಿತ ಕ್ರಮದಿಂದ ರೊಚ್ಚಿಗೆದ್ದಿರುವ ಕೆಲ ಗ್ರಾಮಸ್ಥರು ಮನೆಗಳ ಹೊರಗೆ ತಮ್ಮ ಮನೆ ಮಾರಾಟಕ್ಕಿದೆ ಎಂಬ ಪೋಸ್ಟರ್ಗಳನ್ನು ಅಂಟಿಸಿದ್ದಾರೆ.
ಮನೆಗಳ ಹೊರಗೆ ಭಿತ್ತಿಪತ್ರಗಳನ್ನು ಅಂಟಿಸಿರುವ ಗ್ರಾಮಸ್ಥರು, ನಾವು ಗ್ರಾಮವನ್ನು ತೊರೆಯುತ್ತಿದ್ದು, ನಮ್ಮ ಮನೆಗಳನ್ನು ಮಾರಾಟ ಮಾಡುತ್ತಿದ್ದೇವೆ. ಇಷ್ಟೇ ಅಲ್ಲ, ಜಿಲ್ಲಾಡಳಿತವು ಧಾರ್ಮಿಕ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತಿದೆ ಎಂದು ಆರೋಪಿಸಿದ್ದಾರೆ. ಇದೇ ವೇಳೆ ಗ್ರಾಮಸ್ಥರ ಮನೆಗಳಿಗೆ ಅಂಟಿಸಲಾಗಿದ್ದ ಪೋಸ್ಟರ್ಗಳನ್ನು ಪೊಲೀಸರು ತೆರವುಗೊಳಿಸಿದ್ದಾರೆ. ಗ್ರಾಮದಲ್ಲಿನ ಪರಿಸ್ಥಿತಿಯನ್ನು ಗಮನಗೊಂಡು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ರೂರ್ಕಿ ಮತ್ತು ಹತ್ತಿರದ ಪೊಲೀಸ್ ಠಾಣೆಗಳಿಂದಲೂ ಪೊಲೀಸರನ್ನು ಸ್ಥಳಕ್ಕೆ ಕಳುಹಿಸಲಾಗಿದೆ.
ಇದನ್ನೂ ಓದಿ: ಬೈಕ್ಗೆ ಕಾರು ಡಿಕ್ಕಿ: ದೇವಸ್ಥಾನಕ್ಕೆ ಹೊರಟಿದ್ದ ದಂಪತಿ, ಪುತ್ರಿ ದುರ್ಮರಣ