ಅಯೋಧ್ಯೆ(ಉತ್ತರ ಪ್ರದೇಶ): ಅಯೋಧ್ಯೆಯಲ್ಲಿ ನಿರ್ಮಣಗೊಳ್ಳುತ್ತಿರುವ ಭವ್ಯ ರಾಮಮಂದಿರ ಕಾಮಗಾರಿ ಜೋರಾಗಿ ನಡೆದಿದ್ದು, ಇಂದು ಅಲ್ಲಿಗೆ ಭೇಟಿ ನೀಡಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗರ್ಭಗುಡಿಯ ಶಂಕುಸ್ಥಾಪನೆ ಮಾಡಿದ್ದಾರೆ. ಇದರ ಬೆನ್ನಲ್ಲೇ ಗರ್ಭಗುಡಿಯ ಕಾಮಗಾರಿ ಆರಂಭಗೊಳ್ಳಲಿದೆ. 2020ರ ಆಗಸ್ಟ್ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಮ ಮಂದಿರ ನಿರ್ಮಾಣ ಶಂಕು ಸ್ಥಾಪನೆ ಮಾಡಿದ್ದು, ಕೆಲಸ ಭರದಿಂದ ಸಾಗಿದೆ. ಇದರ ಬೆನ್ನಲ್ಲೇಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಮ ಮಂದಿರದ ಗರ್ಭಗುಡಿಯ ಮೊದಲ ಶಿಲೆಗೆ ಪೂಜೆ ಸಲ್ಲಿಸಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಮಾಹಿತಿ ಹಂಚಿಕೊಂಡಿದ್ದು, ಬೆಳಗ್ಗೆ 9 ಗಂಟೆಗೆ ಶಿಲಾನ್ಯಾಸ ನೆರವೇರಿಸಲಾಗಿದೆ. ಅಯೋಧ್ಯೆಯ 90 ಸಂತರು ಮತ್ತು ಮಹಾಪುರುಷರಿಗೆ ಪೂಜೆಗೆ ಆಹ್ವಾನ ನೀಡಲಾಗಿತ್ತು. ಗರ್ಭಗುಡಿಯನ್ನ ಕೆಂಪು ಕಲ್ಲುಗಳಿಂದ ನಿರ್ಮಾಣ ಮಾಡಲಾಗುತ್ತಿದ್ದು, ಹೆಚ್ಚಿನ ಆದ್ಯತೆ ನೀಡಲಾಗಿದೆ.
ಈ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಟ್ರಸ್ಟ್ ಧರ್ಮದರ್ಶಿಗಳಾದ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀ ಕೂಡ ಭಾಗಿಯಾಗಲಿದ್ದಾರೆ. ಮಂದಿರ ನಿರ್ಮಾಣದ ಹೊಣೆ ಹೊತ್ತ ರಾಮಜನ್ಮ ಭೂಮಿ ಟ್ರಸ್ಟ್, ದೇವಾಲಯದ ಗರ್ಭಗುಡಿಯನ್ನು ರಾಜಸ್ಥಾನದ ಮಖ್ರಾನ ಬೆಟ್ಟದಿಂದ ತರಿಸಲಾದ ಬಿಳಿ ಅಮೃತಶಿಲೆಯಿಂದ ನಿರ್ಮಿಸುತ್ತಿದೆ. ಸುಮಾರು 13,300 ಕ್ಯೂಬಿಕ್ ಅಡಿ ಅಮೃತ ಶಿಲೆ ಬಳಸುವುದಾಗಿ ಟ್ರಸ್ಟ್ ಹೇಳಿದೆ. 2024ರ ಲೋಕಸಭೆ ಚುನಾವಣೆ ವೇಳೆಗೆ ಈ ರಾಮಮಂದಿರ ಭಕ್ತರ ಭೇಟಿಗೆ ಓಪನ್ ಆಗಲಿದ್ದು, ಹೀಗಾಗಿ ಎಲ್ಲ ರೀತಿಯ ಕೆಲಸ ಜೋರಾಗಿ ಆರಂಭಗೊಂಡಿವೆ.