ನವದೆಹಲಿ: ದೇಶದಲ್ಲಿ ಜನಸಂಖ್ಯಾ ನಿಯಂತ್ರಣಕ್ಕಾಗಿ ಕುಟುಂಬ ಯೋಜನೆಯನ್ನು ಹಲವಾರು ದಶಕಗಳ ಹಿಂದೆಯೇ ಜಾರಿಗೊಳಿಸಲಾಗಿದೆ. ಮಹಿಳೆಯರು ಗರ್ಭನಿರೋಧಕಗಳನ್ನು ಬಳಸುವಂತೆ ಮಾಡುವುದು ಕುಟುಂಬ ಯೋಜನೆಯ ಪ್ರಮುಖ ಉದ್ದೇಶ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಇತ್ತೀಚೆಗೆ ವರದಿಯೊಂದನ್ನು ಪ್ರಕಟಿಸಿದ್ದು, ದೇಶದಲ್ಲಿ ಮಹಿಳೆಯರು ಗರ್ಭನಿರೋಧಕಗಳನ್ನು ಬಳಸುವ ಅಂಕಿಅಂಶಗಳ ಬಗ್ಗೆ ಬೆಳಕು ಚೆಲ್ಲುತ್ತದೆ.
ಮಹಿಳೆಯರಲ್ಲಿ ಗರ್ಭನಿರೋಧಕ ವಿಧಾನಗಳ ಬಳಕೆಯು ಮೇಘಾಲಯದಲ್ಲಿ ಅತ್ಯಂತ ಕಡಿಮೆಯಾಗಿದೆ. ನಂತರ ಸ್ಥಾನದಲ್ಲಿ ಮಿಜೋರಾಂ ಮತ್ತು ಬಿಹಾರ ರಾಜ್ಯಗಳಿವೆ. ಮೇಘಾಲಯದಲ್ಲಿ ಶೇಕಡಾ 27, ಮಿಜೋರಾಂನಲ್ಲಿ ಶೇಕಡಾ 31 ಮತ್ತು ಬಿಹಾರದಲ್ಲಿ ಶೇಕಡಾ 56ರಷ್ಟು ಮಂದಿ ಗರ್ಭನಿರೋಧಕ ವಿಧಾನಗಳನ್ನು ಬಳಕೆ ಮಾಡುತ್ತಾರೆ ಎಂದು ವರದಿ ಹೇಳಿದೆ.
3 ರಾಜ್ಯಗಳಲ್ಲಿ ಹೆಚ್ಚು ಬಳಕೆ: ಅತಿ ಹೆಚ್ಚು ಗರ್ಭನಿರೋಧಕಗಳನ್ನು ಬಳಸುವ ರಾಜ್ಯಗಳಲ್ಲಿ ಪಶ್ಚಿಮ ಬಂಗಾಳ, ಒಡಿಶಾ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳಿವೆ. ಈ ರಾಜ್ಯಗಳಲ್ಲಿ ಶೇಕಡಾ 74ರಷ್ಟು ಮಂದಿ ಮಹಿಳೆಯರು ಗರ್ಭನಿರೋಧಕ ವಿಧಾನಗಳ ಬಳಕೆ ಮಾಡುತ್ತಾರೆ. ವಿವಾಹಿತ ಮಹಿಳೆಯರಲ್ಲಿ ವಿಚಾರಕ್ಕೆ ಬರುವುದಾದರೆ, ಈಶಾನ್ಯ ರಾಜ್ಯಗಳಲ್ಲಿ ಸಿಕ್ಕಿಂ ಮತ್ತು ತ್ರಿಪುರಾವನ್ನು ಹೊರತುಪಡಿಸಿ, ಉಳಿದೆಲ್ಲಾ ರಾಜ್ಯಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಗರ್ಭನಿರೋಧಕ ವಿಧಾನಗಳನ್ನು ಬಳಸಲಾಗುತ್ತದೆ.
ಚಂಡೀಗಢದಲ್ಲಿ ಅತಿ ಹೆಚ್ಚು: ಕೇಂದ್ರಾಡಳಿತ ಪ್ರದೇಶಗಳ ಪೈಕಿ ಗರ್ಭನಿರೋಧಕ ವಿಧಾನಗಳ ಬಳಕೆಯು ಲಡಾಖ್‌ನಲ್ಲಿ ಅತಿ ಕಡಿಮೆ ಅಂದರೆ ಶೇಕಡಾ 51ರಷ್ಟು ಮಂದಿ ಮಹಿಳೆಯರು ಗರ್ಭನಿರೋಧಕ ವಿಧಾನಗಳನ್ನು ಬಳಸುತ್ತಾರೆ. ಚಂಡೀಗಢದಲ್ಲಿ ಅತಿ ಹೆಚ್ಚು (ಶೇಕಡಾ 77) ಎಂದು ವರದಿ ಹೇಳಿದೆ. ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ, ವಿವಾಹಿತ ಮಹಿಳೆಯರ ಆಧುನಿಕ ಗರ್ಭನಿರೋಧಕ ಬಳಕೆಯು 2015-16 ಮತ್ತು 2019-21ರ ನಡುವೆ ಶೇಕಡಾ 48ರಿಂದ ಶೇಕಡಾ 56ಕ್ಕೆ ಹೆಚ್ಚಾಗಿದೆ. ಫೀಮೇಲ್ ಸ್ಟೆರಿಲೈಸೇಷನ್ (Female sterilization) ಈಗಲೂ ಅತ್ಯಂತ ಜನಪ್ರಿಯ ಗರ್ಭನಿರೋಧಕ ವಿಧಾನವಾಗಿದೆ. ಈ ವಿಧಾನವನ್ನು ಪ್ರಸ್ತುತ ವಿವಾಹಿತ ಮಹಿಳೆಯರಲ್ಲಿ ಶೇಕಡಾ 98ರಷ್ಟು ಮಂದಿ ಬಳಸುತ್ತಾರೆ.
ಆಧುನಿಕ ಗರ್ಭನಿರೋಧಕ ವಿಧಾನದ ಬಳಕೆದಾರರಲ್ಲಿ ಶೇಕಡಾ 68ರಷ್ಟು ಜನರು ಸಾರ್ವಜನಿಕ ಆರೋಗ್ಯ ವಲಯವನ್ನು ಅವಲಂಬಿಸಿದ್ದಾರೆ. ಹಿಂದಿನ ಐದು ವರ್ಷಗಳಲ್ಲಿ, ಗರ್ಭನಿರೋಧಕ ವಿಧಾನವನ್ನು ಬಳಸಲು ಪ್ರಾರಂಭಿಸಿದ ಶೇಕಡಾ 50ರಷ್ಟು ಮಂದಿ ಮಹಿಳೆಯರು 12 ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಗರ್ಭನಿರೋಧಕ ವಿಧಾನವನ್ನು ನಿಲ್ಲಿಸಿದ್ದಾರೆ. ಅವರು ಗರ್ಭನಿರೋಧಕ ವಿಧಾನವನ್ನು ನಿಲ್ಲಿಸಲು ಪ್ರಮುಖ ಕಾರಣವೆಂದರೆ ಗರ್ಭಿಣಿಯಾಗುವ ಬಯಕೆ. ಶೇಕಡಾ 11ರಷ್ಟು ಮಂದಿ ಗರ್ಭಿಣಿಯಾಗಲು ಗರ್ಭನಿರೋಧಕವನ್ನು ಬಳಸಲು ನಿಲ್ಲಿಸಿದ್ದರು ಎಂದು ತಿಳಿದುಬಂದಿದೆ.
ಶೇ.3ರಷ್ಟು ಮಂದಿಗೆ ಹೈಸ್ಟರೆಕ್ಟಮಿ: ಪ್ರಸ್ತುತ ವಿವಾಹಿತ ಮಹಿಳೆಯರಲ್ಲಿ ಶೇಕಡಾ 9ರಷ್ಟು ಮಂದಿಗೆ ಕುಟುಂಬ ಯೋಜನೆಯ ಅಗತ್ಯತೆ ಇಲ್ಲ. ಶೇಕಡಾ ಮೂರರಷ್ಟು ಮಂದಿ ಮಹಿಳೆಯರು ಹೈಸ್ಟರೆಕ್ಟಮಿ ಮಾಡಿಸಿಕೊಂಡಿದ್ದಾರೆ. ಹೈಸ್ಟರೆಕ್ಟಮಿ ಎಂದರೆ ಗರ್ಭಾಶಯದ ಎಲ್ಲಾ ಅಥವಾ ಒಂದು ಭಾಗವನ್ನು ತೆಗೆದುಹಾಕಲು ನಡೆಸುವ ಶಸ್ತ್ರಚಿಕಿತ್ಸೆ ಆಗಿದೆ. ಮೂರನೇ ಎರಡರಷ್ಟು ಅಂದರೆ ಶೇಕಡಾ 70ರಷ್ಟು ಮಂದಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಹೈಸ್ಟರೆಕ್ಟಮಿ ನಡೆಸಲಾಗಿದೆ.
ಯಾರಿಗೆ, ಎಷ್ಟು ಜ್ಞಾನ?: ಗರ್ಭನಿರೋಧಕ ವಿಧಾನಗಳ ಬಗ್ಗೆ ಬಹುತೇಕ ಮಂದಿಗೆ ತಿಳಿದಿದೆ. ಪ್ರಸ್ತುತ ವಿವಾಹಿತ ಮಹಿಳೆಯರು ಅಥವಾ ಪುರುಷರಲ್ಲಿ ಅಥವಾ 15ರಿಂದ 49 ವರ್ಷದೊಳಗಿನ ಜನರಲ್ಲಿ ಶೇಕಡಾ 99ಕ್ಕಿಂತ ಹೆಚ್ಚು ಮಂದಿಗೆ ಕನಿಷ್ಠ ಪಕ್ಷ ಯಾವುದಾದರೊಂದು ಗರ್ಭ ನಿರೋಧಕ ವಿಧಾನದ ಬಗ್ಗೆ ತಿಳಿದುಕೊಂಡಿದ್ದಾರೆ. ಪ್ರಸ್ತುತ ವಿವಾಹಿತ ಮಹಿಳೆಯರಲ್ಲಿ ಅರ್ಧಕ್ಕಿಂತ ಹೆಚ್ಚು (ಶೇಕಡಾ 52) ಮತ್ತು ಪುರುಷರು (ಶೇಕಡಾ 52) ಮಂದಿಗೆ ತುರ್ತು ಗರ್ಭನಿರೋಧಕದ ಬಗ್ಗೆ ತಿಳಿದಿದ್ದಾರೆ. ಪ್ರಸ್ತುತ ವಿವಾಹಿತ ಮಹಿಳೆಯರಲ್ಲಿ ಅರ್ಧಕ್ಕಿಂತ ಹೆಚ್ಚು ಮತ್ತು ಪ್ರಸ್ತುತ ವಿವಾಹಿತ ಪುರುಷರಲ್ಲಿ ಕಾಲು ಭಾಗಕ್ಕಿಂತ ಹೆಚ್ಚಿನವರು ಹಾಲುಣಿಸುವ ಅಮೆನೋರಿಯಾ ವಿಧಾನದ (Lactational Amenorrhea Method-LAM) ಬಗ್ಗೆ ಎಂದು ವರದಿ ಹೇಳಿದೆ.
ಕಾಂಡೋಮ್ ಬಳಕೆ ಸಾಮಾನ್ಯ: ಪ್ರಸ್ತುತ 15ರಿಂದ 49ರ ವಯೋಮಾನದ ಅಥವಾ ವಿವಾಹಿತ ಮಹಿಳೆಯರಲ್ಲಿ, ಶೇಕಡಾ 38ರಷ್ಟು ಮಹಿಳೆಯರು ಸ್ಟೆರಿಲೈಸೇಷನ್ ಅನ್ನು ಗರ್ಭನಿರೋಧಕ ವಿಧಾನವನ್ನಾಗಿ ಬಳಸುತ್ತಾರೆ. ಇದಷ್ಟು ಮಾತ್ರವಲ್ಲದೇ ಗರ್ಭನಿರೋಧಕವಾಗಿ ಕಾಂಡೋಮ್ಗಳು (ಶೇಕಡಾ 10ರಷ್ಟು) ಮಾತ್ರೆಗಳು (ಶೇಕಡಾ 5ರಷ್ಟು) ಬಳಕೆಯಾಗುತ್ತಿವೆ. ಲೈಂಗಿಕವಾಗಿ ಸಕ್ರಿಯವಾಗಿರುವ ಅವಿವಾಹಿತ ಮಹಿಳೆಯರಲ್ಲಿ, ಕಾಂಡೋಮ್‌ಗಳನ್ನು ಸಾಮಾನ್ಯವಾಗಿ ಬಳಸುವ ವಿಧಾನವಾಗಿದೆ ಅಂದರೆ ಶೇಕಡಾ 27ರಷ್ಟು ಮಂದಿ ಬಳಸುತ್ತಾರೆ. ಫೀಮೇಲ್ ಸ್ಟೆರಿಲೈಸೇಷನ್ ಅನ್ನು ಶೇಕಡಾ 21ರಷ್ಟು ಮಂದಿ ಬಳಸುತ್ತಾರೆ ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಹೇಳಿದೆ.
ಇದನ್ನೂ ಓದಿ: ಉತ್ತಮ ಆರೋಗ್ಯಕ್ಕೆ ಎಷ್ಟು ಹೆಚ್ಚುವರಿ ವಿಟಮಿನ್ ಸಿ ಅಗತ್ಯ?: ಇಲ್ಲಿದೆ ಮಾಹಿತಿ