ಲಖನೌ(ಉತ್ತರ ಪ್ರದೇಶ): ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣಾ ಕಣ ರಂಗೇರಿದ್ದು, ಟಿಕೆಟ್ ಖಚಿತಗೊಂಡಿರುವ ಅಭ್ಯರ್ಥಿಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಭರದ ಚುನಾವಣಾ ಪ್ರಚಾರದಲ್ಲಿ ಮಗ್ನರಾಗಿದ್ದಾರೆ. ಈ ಮಧ್ಯೆ ಮತಯಾಚನೆಗೆ ಆಗಮಿಸಿದ್ದ ಬಿಜೆಪಿ ಶಾಸಕನೋರ್ವನನ್ನ ಗ್ರಾಮಸ್ಥರು ಓಡಿಸಿರುವ ಘಟನೆ ನಡೆದಿದೆ.
ಉತ್ತರ ಪ್ರದೇಶದ ಮುಜಾಫರನಗರದ ಖತೌಲಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ವಿಕ್ರಮ್ ಸಿಂಗ್ ಸೈನಿ ಮತಯಾಚನೆ ಮಾಡಲು ಗ್ರಾಮವೊಂದಕ್ಕೆ ಆಗಮಿಸಿದ್ದರು. ಈ ವೇಳೆ ಗ್ರಾಮಸ್ಥರು ಶಾಸಕರ ಕಾರು ತಡೆದು ವಾಪಸ್ ಕಳುಹಿಸಿದ್ದು, ಅವರ ವಿರುದ್ಧ ಘೋಷಣೆ ಸಹ ಕೂಗಿದ್ದಾರೆ. ಬೇರೆ ಯಾವುದೇ ಆಯ್ಕೆಯಿಲ್ಲದೇ ಅವರು ವಾಪಸ್ ಹೋಗಿದ್ದಾರೆ.
ಘಟನೆಯ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ವಿವಾದಿತ ಕೃಷಿ ಕಾನೂನುಗಳಿಂದ ಇಲ್ಲಿಂದ ಜನರು ಅಸಮಾಧಾನಗೊಂಡಿದ್ದು, ಅದೇ ಕಾರಣಕ್ಕಾಗಿ ಈ ರೀತಿಯಾಗಿ ನಡೆದುಕೊಂಡಿದ್ದಾರೆಂದು ತಿಳಿದು ಬಂದಿದೆ.
ಅನೇಕ ವಿವಾದಿತ ಹೇಳಿಕೆ ನೀಡಿರುವ ಬಿಜೆಪಿ ಶಾಸಕ
ಬಿಜೆಪಿ ಶಾಸಕರಾಗಿರುವ ವಿಕ್ರಮ್ ಸಿಂಗ್ ಸೈನಿ ಹಿಂದಿನಿಂದಲೂ ಅನೇಕ ರೀತಿಯ ವಿವಾದಿತ ಹೇಳಿಕೆ ನೀಡಿದ್ದು, ಟೀಕೆಗೆ ಗುರಿಯಾಗಿದ್ದಾರೆ. 'ಭಾರತ ಅಸುರಕ್ಷಿತವಾಗಿದೆ ಎಂದು ಭಾವಿಸುವವರಿಗೆ ಬಾಂಬ್ ಹಾಕುವ ಬೆದರಿಕೆ' ನೀಡಿದ್ದರು. ಇದಕ್ಕೂ ಮೊದಲು 'ನಮ್ಮ ದೇಶವನ್ನ ಹಿಂದೂಸ್ತಾನ್ ಎಂದು ಕರೆಯಲಾಗುತ್ತದೆ. ಇದು ಹಿಂದೂಗಳ ರಾಷ್ಟ್ರ' ಎಂದು ಹೇಳಿದ್ದರು. ಜೊತೆಗೆ 'ಗೋಹತ್ಯೆ ಮಾಡುವವರ ಕೈ-ಕಾಲು ಮುರಿಯುವ ಬೆದರಿಕೆ' ಸಹ ಹಾಕಿದ್ದರು.
ಇದನ್ನೂ ಓದಿರಿ: ಪರಿಕ್ಕರ್ ಪುತ್ರನಿಗೆ 'ಬಿಜೆಪಿ' ಟಿಕೆಟ್ ನಿರಾಕರಣೆ.. AAP ಸೇರುವಂತೆ ಕೇಜ್ರಿವಾಲ್ ಆಫರ್
403 ಕ್ಷೇತ್ರಗಳ ಉತ್ತರ ಪ್ರದೇಶ ವಿಧಾನಸಭೆ ಒಟ್ಟು 7 ಹಂತಗಳಲ್ಲಿ ನಡೆಯಲಿದ್ದು, ಬಿಜೆಪಿ, ಕಾಂಗ್ರೆಸ್ ಈಗಾಗಲೇ ಅಭ್ಯರ್ಥಿಗಳ ಮೊದಲ ಲಿಸ್ಟ್ ರಿಲೀಸ್ ಮಾಡಿದೆ.