ಹರ್ದೋಯ್ (ಉತ್ತರಪ್ರದೇಶ) : ಇಲ್ಲಿನ ಹರ್ದೋಯ್ ಜಿಲ್ಲೆಯಲ್ಲಿ ನಡೆದ ಆಘಾತಕಾರಿ ಘಟನೆಯೊಂದರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. "ವ್ಯಕ್ತಿಯೊಬ್ಬ ತನ್ನ 10 ವರ್ಷದ ಮಗನನ್ನು ಬೆತ್ತಲೆಯಾಗಿ ರೈಲ್ವೆ ಹಳಿಯ ಮೇಲೆ ಬಲವಂತವಾಗಿ ಕೂರಿಸಿದ ಘಟನೆ ನಡೆದಿದೆ" ಎಂದು ಪೊಲೀಸರು ತಿಳಿಸಿದ್ದಾರೆ.
ವಿಡಿಯೋದಲ್ಲೇನಿದೆ? : ತಂದೆಯೊಬ್ಬ ತನ್ನ ಚಿಕ್ಕ ಮಗನ ಕೈ ಮತ್ತು ಕಾಲುಗಳನ್ನು ಹಗ್ಗದಿಂದ ಕಟ್ಟಿ ರೈಲು ಹಳಿಗಳ ಮೇಲೆ ಕುಳಿತುಕೊಳ್ಳುವಂತೆ ಗದರಿಸಿದ್ದಾನೆ. ಈ ವೇಳೆ ಬಾಲಕನ ಸಹೋದರಿ ತಮ್ಮ ತಂದೆಯೊಂದಿಗೆ ವಾಗ್ದಾದ ನಡೆಸಿದ್ದಾರೆ. ಬಳಿಕ, ಮುಂಭಾಗದಿಂದ ರೈಲು ಬರುತ್ತಿರುವುದನ್ನು ಗಮನಿಸಿ ಆಕೆ, ಬಾಲಕನನ್ನು ಹಳಿಯಿಂದ ತೆಗೆಯುವಂತೆ ಒತ್ತಾಯಿಸಿದ್ದಾಳೆ.
ಆಕೆಯ ಮನವಿಗೆ ಸ್ಪಂದಿಸಿದ ತಂದೆ, ರೈಲು ಬರುವುದಕ್ಕೂ ಮುನ್ನ ಮಗುವನ್ನು ಎತ್ತಿಕೊಂಡು ಸ್ವಲ್ಪ ದೂರ ಹೋಗಿ ಅವನೊಂದಿಗೆ ಕೂರುತ್ತಾನೆ. ಈ ವೇಳೆ ಸ್ಥಳದಲ್ಲಿ ಸೇರಿದ್ದ ಕೆಲ ಜನ ವಿಡಿಯೋ ಮಾಡುತ್ತಿದ್ದು, ಮಗುವನ್ನು ರಕ್ಷಿಸಲು ಅಥವಾ ತಂದೆಯ ಮನವೊಲಿಸಲು ಯಾರೂ ಮಧ್ಯಪ್ರವೇಶಿಸಿಲ್ಲ. ಘಟನೆಯು ಹರ್ದೋಯಿ ರೈಲು ನಿಲ್ದಾಣದ ಸಮೀಪವಿರುವ ಸೀತಾಪುರ ಮೇಲ್ಸೇತುವೆಯ ಬಳಿ ನಡೆದಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ರೈಲ್ವೆ ರಕ್ಷಣಾ ಪಡೆ (RPF) ಆರೋಪಿ ವಿರುದ್ಧ ಸೂಕ್ತ ಕ್ರಮ ಕೈಗೊಂಡಿದೆ.
ವರದಿಗಳ ಪ್ರಕಾರ, ಬಾಲಕ ಭಾನುವಾರ ಬೆಳಗ್ಗೆ ಮನೆಯಿಂದ ನಾಪತ್ತೆಯಾಗಿದ್ದ. ಸಂಜೆಯಾಗುತ್ತಿದ್ದಂತೆ ಮಗನ ಸುಳಿವು ಸಿಗದ ಕುಟುಂಬಸ್ಥರು ಹುಡುಕಾಟ ಆರಂಭಿಸಿದ್ದರು. ಆದರೆ, ಬಾಲಕ ಪತ್ತೆಯಾಗಿರಲಿಲ್ಲ. ರಾತ್ರಿ 11 ಗಂಟೆ ಸುಮಾರಿಗೆ ಮಗು ಮನೆಗೆ ಮರಳಿದೆ. ಕೋಪದ ಭರದಲ್ಲಿ ತಂದೆ ಮಗುವನ್ನು ರೈಲ್ವೆ ಹಳಿಗೆ ಕರೆದೊಯ್ದು ಬಲವಂತವಾಗಿ ಬಟ್ಟೆ ಬಿಚ್ಚಿಸಿ, ಹಗ್ಗದಿಂದ ಕೈ ಕಾಲುಗಳನ್ನು ಕಟ್ಟಿ ಹಳಿ ಮೇಲೆ ಕೂರಿಸಿದ್ದಾನೆ.
ಇದನ್ನೂ ಓದಿ : Odisha Rail Mishap Video : ಒಡಿಶಾ ಭೀಕರ ರೈಲು ದುರಂತಕ್ಕೂ ಮುನ್ನ ಸೆರೆಯಾದ ವಿಡಿಯೋ
ಆರೋಪಿ ಬಂಧನ : ಆರ್‌ಪಿಎಫ್‌ನ ಇನ್ಸ್ಪೆಕ್ಟರ್ ಆರ್‌ಬಿ ಸಿಂಗ್ ಅವರು ವಿಡಿಯೋ ವೈರಲ್ ಆಗುತ್ತಿದ್ದಂತೆ ತನಿಖೆ ಮಾಡಲು ಸಬ್ ಇನ್ಸ್ಪೆಕ್ಟರ್ ಘಮ್ಮುರಾಮ್ ಮತ್ತು ಹೆಡ್ ಕಾನ್ಸ್ಟೇಬಲ್ ಮೊಹಮ್ಮದ್ ಜಮೀರ್ ಖಾನ್ ಅವರ ನೇತೃತ್ವದಲ್ಲಿ ತಂಡವನ್ನು ರಚಿಸಿದ್ದರು. ಬಳಿಕ ತನಿಖೆ ನಡೆಸಿದ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ವಿಡಿಯೋದಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿಯನ್ನು ನಗರದ ಕೊತ್ವಾಲಿ ಪ್ರದೇಶದ ನಿವಾಸಿ ಅನುರಾಗ್ ಗುಪ್ತಾ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ : Train Accident Averted In Bilaspur : ಒಂದೇ ಹಳಿ ಮೇಲೆ ಬಂದ ಪ್ಯಾಸೆಂಜರ್ ರೈಲು - ಗೂಡ್ಸ್ ರೈಲು.. ವಿಡಿಯೋ ವೈರಲ್