ಲಖೀಂಪುರ ಖೇರಿ(ಉತ್ತರ ಪ್ರದೇಶ): ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಕೃಷಿ ಕಾಯ್ದೆಗಳ ವಿರುದ್ಧ ದೊಡ್ಡ ಮಟ್ಟದ ಪ್ರತಿಭಟನೆ ನಡೆದು, ಹಲವು ರೈತರ ಸಾವಿಗೆ ಕಾರಣವಾಗಿದ್ದ ಲಖೀಂಪುರ ಖೇರಿ ಜಿಲ್ಲೆಯಲ್ಲಿನ ಎಲ್ಲ 8 ವಿಧಾನಸಭೆ ಸ್ಥಾನಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಲಖೀಂಪುರದಲ್ಲಿ ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ನಡೆದ ಪ್ರತಿಭಟನೆಯ ವೇಳೆ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ರೈತರ ಮೇಲೆ ಕಾರು ಹರಿಸಿದ್ದರು. ಈ ಘಟನೆಯ ಬಳಿಕ ದೊಡ್ಡ ಮಟ್ಟದ ಹಿಂಸಾಚಾರ ಉಂಟಾಗಿ ನಾಲ್ವರು ರೈತರು, ಮೂವರು ಬಿಜೆಪಿ ಕಾರ್ಯಕರ್ತರು ಸೇರಿದಂತೆ ಎಂಟು ಜನರು ಸಾವಿಗೀಡಾಗಿದ್ದರು. ಇದು ದೇಶಾದ್ಯಂತ ಹೆಚ್ಚು ಚರ್ಚೆಗೆ ಗ್ರಾಸವಾಗಿತ್ತು. ಜೊತೆಗೆ ಭಾರತೀಯ ಜನತಾ ಪಾರ್ಟಿ ವಿರುದ್ಧ ಪ್ರತಿಭಟನೆಗೂ ಕಾರಣವಾಗಿತ್ತು.
ಇದನ್ನೂ ಓದಿ: 'ಶ್ರೀಕೃಷ್ಣ ನನ್ನ ಕನಸಲ್ಲಿ ಬಂದು ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲಿದೆ ಎಂದಿದ್ರು': ಹೇಮಮಾಲಿನಿ
ಈ ಘಟನೆಯ ಹಿನ್ನೆಲೆಯಲ್ಲಿ 2022ರ ವಿಧಾನಸಭೆ ಚುನಾವಣೆಯಲ್ಲಿ ಲಖೀಂಪುರ ಖೇರಿಯಲ್ಲಿ ಬಿಜೆಪಿ ಖಾತೆ ತೆರೆಯುವ ಸಾಧ್ಯತೆ ಕಡಿಮೆ ಎಂಬ ಮಾತು ಕೇಳಿ ಬಂದಿದ್ದವು. ಆದರೆ ಇದೀಗ ಎಲ್ಲ ಎಂಟು ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಹಿಂಸಾಚಾರ ನಡೆದ ನಿಘಾಸನ್ ಕ್ಷೇತ್ರದಲ್ಲಿ ಬಿಜೆಪಿಯ ಶಶಾಂಕ್ ವರ್ಮಾ 40 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ದಾಖಲು ಮಾಡಿದ್ದಾರೆ. 2017 ರಲ್ಲೂ ಲಖೀಂಪುರ್ನ ಪಾಲಿಯಾ, ನಿಗಾಸನ್, ಗೋಲಾ ಖೋರಾನಾಥ್, ಶ್ರೀನಗರ, ಧೌರಾಹ್ರಾ, ಲಖಿಂಪುರ, ಕಸ್ತಾ ಮತ್ತು ಮೊಹಮ್ಮದಿಯಲ್ಲಿ ಬಿಜೆಪಿ ಗೆಲುವು ದಾಖಲು ಮಾಡಿತ್ತು.